ಯುವಕನ ಬೆನ್ನಟ್ಟಿ ತುಳಿದ ಒಂಟಿ ಸಲಗ: ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡ ರೈತ

ಹಾಸನ: ಗ್ರಾಮಸ್ಥರು ಸಿಡಿಸಿದ ಪಟಾಕಿ ಸದ್ದಿನಿಂದ ಕಿರಿಕಿರಿಗೊಳಗಾದ ಕಾಡಾನೆ ತನ್ನನ್ನು ಕಂಡು ಓಡುತ್ತಿದ್ದ ಯುವಕನನ್ನು ಬೆನ್ನಟ್ಟಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಆಲೂರು ತಾಲ್ಲೂಕಿನ, ಹೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಗಾಯಗೊಂಡ ಯುವಕ. ಕೆಳಗೆ ಬಿದ್ದ ಆತನನ್ನು ಆನೆ ಕಾಲಿನಿಂದ ತುಳಿದಿದ್ದು ಯುವಕನ ಎದೆಭಾಗ, ತಲೆಗೆ ಗಾಯವಾಗಿದ್ದು ಒಂದು ಕೈ ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ಆತನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂದಿನಂತೆ ತಮ್ಮ ಜಮೀನಿಗೆ ತೆರಳಿದ್ದ ಮಲ್ಲಿಕಾರ್ಜುನ, ಜಾನುವಾರುಗಳಿಗಾಗಿ ಹುಲ್ಲು ಕೊಯ್ಯುತ್ತಿದ್ದರು. ಅದೇ ಸಮಯದಲ್ಲಿ ಗ್ರಾಮದಲ್ಲಿ ಬೀಡುಬಿಟಿದ್ದ ಒಂಟಿ ಸಲಗವನ್ನು ಓಡಿಸಲು ಗ್ರಾಮಸ್ಥರು ಪಟಾಕಿ ಸಿಡಿಸಿದರು.

ಇದರಿಂದ ಕಿರಿಕಿರಿಗೊಳಗಾದ ಆನೆ ಮಲ್ಲಿಕಾರ್ಜುನ ಕೆಲಸ ಮಾಡುತ್ತಿದ್ದ ಹೊಲದತ್ತ ನುಗ್ಗಿತು. ಆನೆ ಕಂಡ ಆತ ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದಾಗ ಎಡವಿ ಬಿದ್ದಿದ್ದಾನೆ. ಅಷ್ಟರಲ್ಲಿ ಬೆನ್ನತ್ತಿ ಬಂದ ಆನೆ ತುಳಿದು ಗಾಯಗೊಳಿಸಿದೆ. ಆದರೆ ಗ್ರಾಮಸ್ಥರು ಪಟಾಕಿ ಸಿಡಿಸಿ ಬೆದರಿಸಿದ್ದರಿಂದ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಅದೃಷ್ಟವಶಾತ್ ಯುವಕನ ಪ್ರಾಣ ಉಳಿದಿದೆ.