Holenarasipura ಹೊಳೆನರಸೀಪುರ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಮಹಿಳೆ ಹಾಗು ಕೊಲೆ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಟ್ಟಾಯ ಹೋಬಳಿ ಮುಕುಂದೂರು ಹೊಸಳ್ಳಿ ಗ್ರಾಮದ ಆನಂದ (36) ಮೃತ ದುರ್ದೈವಿ. ಪತ್ನಿ ಎಂ.ಕೆ.ಅರ್ಚಿತ ಹಾಗು ಸೋಮಶೇಖರ ಬಂಧಿತ ಆರೋಪಿಗಳು.
ಸೋಮಶೇಖರ ಮತ್ತು ಅರ್ಚಿತ ಅಕ್ರಮ ಸಂಬಂಧಕ್ಕೆ ಆನಂದ ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ ಪತ್ನಿಯೇ ಸಂಚು ರೂಪಿಸಿ ಕೊಲೆ ಮಾಡಿಸಿದ್ದಳು. ಸಾಕ್ಷ್ಯ ನಾಶಕ್ಕಾಗಿ ಶವವನ್ನು ಕೆರೆಗೆ ಎಸೆದಿದ್ದರು.
ಅರಸೀಕೆರೆ ತಾಲ್ಲೂಕು ಮಾದನಹಳ್ಳಿ ಗ್ರಾಮದ ಅರ್ಚಿತ ಹಾಗು ಆನಂದ ಅವರ ವಿವಾಹ 10 ವರ್ಷಗಳ ಹಿಂದೆ ನಡೆದಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಡಿ. 26 ರಂದು ಪೆಟ್ರೋಲ್ ತರುವುದಕ್ಕಾಗಿ ಹಂಗರಹಳ್ಳಿಗೆ ತೆರಳಿದ್ದ ಆನಂದ ಮನೆಗೆ ಬಂದಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಡಿ. 28ರಂದು ಹಳೇಕೋಟೆ ಹೋಬಳಿ ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದ ಅವರ ಮೃತದೇಹ ಪತ್ತೆಯಾಗಿತ್ತು. ಪತಿ ಸಾವಿಗೆ ತಾನೆ ಕಾರಣಳಾಗಿದ್ದರೂ ಸಂಶಯ ಬಾರದಂತೆ ವರ್ತಿಸಿದ್ದ ಅರ್ಚಿತಾ ಗಂಡನ ಸಾವಿನ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಈ ವೇಳೆ ಆರೋಪಿ ಸೋಮಶೇಖರ ಸಹ ಹಾಜರಿದ್ದ. ತಿಥಿ ಕಾರ್ಯ ಮುಗಿದ ಬಳಿಕ ನಾಪತ್ತೆಯಾಗಿದ್ದ.
ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿ:
ಇಬ್ಬರ ನಡುವಿನ ಅಕ್ರಮ ಸಂಬಂಧ ವಿಚಾರ ತಿಳಿದ ಆನಂದ ತಿಂಗಳ ಹಿಂದಷ್ಟೇ ಮನೆಯಲ್ಲಿ ಜಗಳ ಮಾಡಿದ್ದ. ಈ ವಿಚಾರವನ್ನು ಅರ್ಚಿತ ಪ್ರಿಯಕರ ಸೋಮಶೇಖರಗೆ ಹೇಳಿದ್ದಳು. ಆನಂದನನ್ನು ಹತ್ಯೆಗೈದರೆ ಇಬ್ಬರೂ ಸುಖವಾಗಿ ಇರಬಹುದೆಂದು ಯೋಜನೆ ರೂಪಿಸಿದ್ದರು.
ಡಿ. 26 ರಂದು ಆನಂದ ಪೆಟ್ರೋಲ್ ತರುವುದಕ್ಕಾಗಿ ಹಂಗರಹಳ್ಳಿಗೆ ಹೋಗುತ್ತಿರುವುದನ್ನು ಅರ್ಚಿತಳಿಂದ ತಿಳಿದುಕೊಂಡ ಸೋಮಶೇಖರನು ಆನಂದಗೆ ಕರೆ ಮಾಡಿ
ಹಂಗರಹಳ್ಳಿಯ ಹೇಮಾವತಿ ನಾಲೆಯ ಬಳಿ ಮಾತುಕತೆಗಾಗಿ ಕರೆಸಿಕೊಂಡಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದ. ನಂತರ ಯಾರಿಗೂ ಸಂಶಯ ಬಾರದಿರಲಿ ಎಂದು ಕೆರೆಯಲ್ಲಿ ಶವ ಎಸೆದು ಬಂದಿದ್ದ.
ಸುಳಿವು ನೀಡಿದ ಗಾಯದ ಗುರುತು: ಶವ ಪಂಚನಾಮೆ ಸಂದರ್ಭದಲ್ಲಿ ಆನಂದನ ಸಹೋದರ ಚಂದ್ರಶೇಖರ ಅವರು ಮುಂಗೈ ತೋರು ಬೆರಳು, ಎರಡು ಮಂಡಿ, ಕಾಲಿನ ಬೆರಳು ಹಾಗು ಅಲ್ಲಲ್ಲಿ ತರಚಿದ ಗಾಯಗಳಾಗಿರುವುದನ್ನು ಗಮನಿಸಿದ್ದರು.
ಅಂತ್ಯಕ್ರಿಯೆ ಬಳಿಕ ನಾಪತ್ತೆಯಾಗಿದ್ದ ಸೋಮಶೇಖರ ಮತ್ತೆ ಪ್ರತ್ಯಕ್ಷವಾಗಿ ಅರ್ಚಿತಳೊಂದಿಗೆ ಸಲುಗೆಯಿಂದ ಇರುವುದನ್ನು ಮೃತ ಆನಂದನ ಸಹೋದರಿಯ ಪತಿ ಗಮನಿಸಿದ್ದರು. ಆ ಹಿನ್ನಲೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತ್ವರಿತಗತಿಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.