ಹೊಳೆನರಸೀಪುರ: ಪಟ್ಟಣದ ಕೋಟೆ ಬೀದಿಯಲ್ಲಿ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೈಕ್‌ಗೆ ಹಾಗೂ ವಾಸದ ಮನೆಯ ಬಾಗಿಲಿಗೆ ಬೆಂಕಿ ಹಾಕಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಪುಟ್ಟರಾಜು ಎಂಬುವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಎಕ್ಸಿಸ್ 120 ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆಯ ಬಾಗಿಲಿಗೂ ಬೆಂಕಿಯಿಂದ ಹಾನಿಯಾಗಿದೆ.
ಬೈಕ್ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಮನೆಯವರು ಹೊರಗೆ ಬರಲು ಯತ್ನಿಸಿದಾಗ, ಬಾಗಿಲೂ ಉರಿಯುತ್ತಿರುವುದು ಕಂಡುಬಂದಿದೆ. ಪುಟ್ಟರಾಜು ಅವರು ಬಾಗಿಲಿಗೆ ನೀರು ಸುರಿದು ಬೆಂಕಿಯನ್ನು ನಂದಿಸಿದರಾದರೂ, ಅಷ್ಟರಲ್ಲಿ ಬೈಕ್ ಸಂಪೂರ್ಣ ಸುಟ್ಟುಹೋಗಿತ್ತು.
ಬೈಕ್‌ನ ಪಕ್ಕದಲ್ಲೇ ನಿಂತಿದ್ದ ಕಾರುಗಳು ಹಾನಿಯಿಂದ ಪಾರಾಗಿವೆ. ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಪೋಲೀಸ್ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭವಾಗಿದೆ.