ಅಗ್ನಿಶಾಮಕ ವಾಹನಕ್ಕೇ ಬೆಂಕಿ, ಸಿಬ್ಬಂದಿಗೂ ಗಾಯ: ಹೊಳೆನರಸೀಪುರದಲ್ಲಿ ಹೊತ್ತಿ ಉರಿದ ಸಾಮಿಲ್

ಹೊಳೆನರಸೀಪುರ: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲೇವುಡ್ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಮರ ಮತ್ತು ಪ್ಲೈವುಡ್ ನಾಶವಾಗಿದೆ. ಕಾರ್ಖಾನೆಯ ಮಾಲೀಕ ಹಮಿದ್ ಅವರಿಗೆ ಸೇರಿದ ಸೂರ್ಯ ಸಾಮಿಲ್ ನಲ್ಲಿ ಗುರುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ದಾಸ್ತಾನು ಇರಿಸಿದ್ದ ಪ್ಲೇವುಡ್ ಮತ್ತು ಮರದ ದಿಮ್ಮಿಗಳು ಬೆಂಕಿಗೆ ಆಹುತಿಯಾಗಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಆಘಾತಕ್ಕೆ ಒಳಗಾದರೂ ಅಲ್ಲಿಂದ ಓಡಿ ಬಂದು ಸುರಕ್ಷಿತ ಸ್ಥಳದಲ್ಲಿ ನಿಂತರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಬೆಂಕಿಯ ರಭಸಕ್ಕೆ ದೊಡ್ಡ ಪ್ರಮಾಣದ ಆಸ್ತಿ ಹಾನಿ ಉಂಟಾಗಿದೆ.

ತಕ್ಷಣ ಮಾಹಿತಿ ಪಡೆದ ಅಗ್ನಿಶಾಮಕ ದಳ ಹಾಸನ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರಗಳಿಂದ ಹಲವು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು. ಇದರಿಂದ ಮತ್ತಷ್ಟು ನಷ್ಟವನ್ನು ತಪ್ಪಿಸಲು ಸಾಧ್ಯವಾಯಿತು. ಆದರೆ, ಬೆಂಕಿಯ ತೀವ್ರತೆಗೆ ಅಗ್ನಿಶಾಮಕ ದಳದ ಮಿನಿ ಬೆಂಕಿ ನಂದಿಸುವ ವಾಹನದ ಕೆಲವು ಭಾಗಗಳು ಕೂಡಾ ಸುಟ್ಟು ಹೋದವು.

ಅಗ್ನಿ ಶಮನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಠಾಣಾಧಿಕಾರಿ ಸೋಮಶೇಖರ್, ಚಾಲಕ ಜನಾರ್ಧನ್ ಮತ್ತು ವಿಷ್ಣು ಅವರ ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ತಕ್ಷಣವೇ ವೈದ್ಯಕೀಯ ನೆರವು ನೀಡಲಾಗಿದೆ.