ಹಾಸನ: ನಗರದ ಖಾಸಗಿ ಕಾಲೇಜಿನಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಆರಂಭವಾಗಿದೆ.
ಹಾಸನದ ಹೊಸಕೊಪ್ಪಲು ಕೈಗಾರಿಕಾ ಪ್ರದೇಶದಲ್ಲಿರುವ ವಿದ್ಯಾಸೌಧ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವುದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದು ರೀಲ್ಸ್ ಮಾಡಿದ್ದು ವಿವಾದ ಹುಟ್ಟು ಹಾಕಿದೆ.
ಕಾಲೇಜಿಗೆ ಸಮವಸ್ತ್ರದಲ್ಲಿ ಬರುತ್ತಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಇತ್ತೀಚಿಗೆ ತರಗತಿಯಲ್ಲಿ ಹಿಜಾಜ್ ಧರಿಸಲು ಆರಂಭಿಸಿದ್ದರು.
ಆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದ ಹಿರಿಯ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲರು, ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವುದರಿಂದ ಸಮವಸ್ತ್ರ ಮಾತ್ರವೇ ಧರಿಸುವಂತೆ ಸಲಹೆ ನೀಡಿದ್ದರು.
ಆದರೆ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ಬುದ್ದಿ ಮಾತಿಗೂ ಕ್ಯಾರೆ ಎನ್ನದೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದರು.
ಇದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿದ್ದಾರೆ. ಅಲ್ಲದೆ ಶಾಲು ಧರಿಸಿ ರೀಲ್ಸ್ ಮಾಡಿರುವ ಕೂಡ ಮಾಡಿದ್ದಾರೆ.
ಕೇಸರಿ ಶಾಲು ಹಾಕಿದ್ದನ್ನು ಪ್ರಶ್ನಿಸಿದ ಕಾಲೇಜಿನ ಉಪನ್ಯಾಸಕಿ, ಅವರು ಹಿಜಾಬ್ ಧರಿಸಿ ಬಂದಿರುವುದಕ್ಕೆ ನೀವು ಕೇಸರಿ ಶಾಲು ಹಾಕಿಕೊಂಡು ಬಂದಿದ್ದೀರಿ ಅಷ್ಟೇ ಎಂದಿದ್ದಾರೆ.
ಇದಕ್ಕೆ ಮಾರುತ್ತರ ನೀಡಿದ ವಿದ್ಯಾರ್ಥಿಗಳು, ಹೌದು, ಹೌದು, ಏನು ಇವಾಗ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿಗೆ ಹೊಸ ತಲೆನೋವು ಶುರುವಾದಂತಾಗಿದೆ.