ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿ ಹಾಗೂ ಸಿಎಂ ಬದಲಾವಣೆ ಪ್ರತಿಪಕ್ಷಗಳ ಕಲ್ಪನೆ ಮಾತ್ರ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಹಾಸನ: ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಹೆಚ್ಚಿದೆ ಎನ್ನುವುದು ಕೇವಲ ಪ್ರತಿಪಕ್ಷ ಹಾಗೂ ಮಾಧ್ಯಮಗಳ ಸೃಷ್ಟಿ ಎಂದು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಪ್ರತಿಕ್ರಿಯಿಸಿದರು.

ನಗರದ ಹಿಮ್ಸ್ ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸುವಾಗ ನಿರ್ದಿಷ್ಟ ವಿಚಾರಗಳಿರಬೇಕು. ನಮ ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸುತ್ತಿದ್ದು, ಗ್ಯಾರಂಟಿ ಯೋಜನೆಗಳಿಂದ ಜನರು ನೆಮದಿಯಿಂದ ಇದ್ದಾರೆ.

ಪ್ರತಿಪಕ್ಷದ ನಾಯಕರು ಇದನ್ನು ಸಹಿಸಲಾಗದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿ ಹಾಗೂ ಮುಖ್ಯಮಂತ್ರಿ ಬದಲಾವಣೆ ವಿಚಾರಗಳು ಕೇವಲ ಕಲ್ಪನೆ ಮಾತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ.

ಐದು ವರ್ಷಪೂರ್ತಿ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಇದರಲ್ಲಿ ಯಾವುದೇ ಗೊಂದಲ ಬೇಡವೆಂದರು. ಬಿಜೆಪಿ ನಾಯಕರಿಗೆ ಮಾತನಾಡಲು ವಿಷಯವಿಲ್ಲದಿರುವುದರಿಂದ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಇದಕ್ಕೆ ರಾಜ್ಯದ ಜನರು ಕಿವಿಗೊಡಬೇಕಿಲ್ಲ. ಮೈಸೂರಿನಲ್ಲಿ ಮುಖ್ಯಮಂತ್ರಿ ಕುಟುಂಬಕ್ಕೆ ನಿವೇಶನ ಹಂಚಿಕೆ ಕುರಿತು ಸಿದ್ದರಾಮಯ್ಯ ಅವರೇ ಪ್ರತಿಕ್ರಿಯಿಸಿದ್ದಾರೆ. ಜಮೀನು ಪಡೆದಿದ್ದ ಮುಡಾ ಪರ್ಯಾಯವಾಗಿ ನಿವೇಶನ ನೀಡಿದೆ. ಕಾನೂನಿನಲ್ಲಿ ಏನಿದೆಯೋ ಅದೇ ಆಗಿದೆ ಎಂದರು.

ರಾಮನಗರ ಅಥವಾ ಕನಕಪುರದಲ್ಲಿ ಹೊಸ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ ಬಂದಿದ್ದು, ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹಾಸನದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಹೆಚ್ಚುವರಿ 50 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೆಚ್ಚಿನ ಅನುದಾನ ಬೇಕಿರುವುದರಿಂದ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚು ವರದಿಯಾಗುತ್ತಿದ್ದು, ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಡೆಂಗ್ಯೂ ಪರೀಕ್ಷೆಗಳನ್ನು ಹೆಚ್ಚಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳನ್ನು ಸುಪರ್ದಿಗೆ ಪಡೆಯಲಾಗುತ್ತಿದೆ. ಸಾರ್ವಜನಿಕರು ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸರ್ಕಾರ ಡೆಂಗ್ಯೂ ವರದಿ ಬಿಡುಗಡೆಯಲ್ಲಿ ಲೋಪ ಎಸಗುತ್ತಿದೆ ಎಂಬುದೆಲ್ಲ ಆಧಾರ ರಹಿತ ಆರೋಪ. ಹಾಗೆ ಮಾಡುವುದರಿಂದ ನಮಗೆ ಯಾವ ಲಾಭವೂ ಇಲ್ಲ ಎಂದರು.