ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಪ್ರಕರಣ; ಸಂತ್ರಸ್ತರ ಗುರುತು ಬಹಿರಂಗಗೊಳಿಸಿದ ಮಾಧ್ಯಮಗಳ ಮೇಲೆ ಹೈಕೋರ್ಟ್ ಸುಮೋಟೋ ಚಾಟಿ

ಬೆಂಗಳೂರು: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆ ಗುರುತು ಬಹಿರಂಗಗೊಳಿಸಿದ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಹೈಕೋರ್ಟ್ ಬಿಸಿ ಮುಟ್ಟಿಸಿದ್ದು ಸೂಮೋಟೋ ಪ್ರಕರಣ ಕೈಗೆತ್ತಿಕೊಂಡಿದೆ.
ಈ ಸಂಬಂಧ ಪತ್ರಿಕೆಗಳಿಗೆ ಎಚ್ಚರಿಕೆ ನೋಟೀಸ್ ರವಾನಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಸಿ.ಆರ್.ನವೀನ್, ದೌರ್ಜನ್ಯಕ್ಕೊಳಗಾದ ಮಹಿಳೆಯ ಗುರುತು ಮರೆ ಮಾಚದೆ ಸುದ್ದಿ ಪ್ರಸಾರ ಮಾಡಿದರೆ ಮುಂದಿನ ಆಗುಹೋಗುಗಳಿಗೆ ಅಂತಹ ಮಾಧ್ಯಮಗಳೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಚಿವರ ಭೇಟಿಗಳ ವರದಿ ವೇಳೆಯೂ ಸಂತ್ರಸ್ತರ ಗುರುತು ಪತ್ತೆಯಾಗುವಂತೆ ವರದಿ ಮಾಡಕೂಡದು ಎಂದು ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.

ನೋಟೀಸ್ ಪೂರ್ಣಪಾಠ ಇಂತಿದೆ:
ಮಾನ್ಯರೆ,

ವಿಷಯ: ಮಹಿಳೆಯನ್ನು ಅನಾಗರೀಕವಾಗಿ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ
ರಾಜ್ಯ ಉಚ್ಚ ನ್ಯಾಯಾಲಯವು ಸುಮೋಟೋ ಪ್ರಕರಣ ಕೈಗೆತ್ತಿಕೊಂಡಿರುವ ಕುರಿತು.

ಉಲ್ಲೇಖ: ಮುಖ್ಯ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ ಇವರ ಆದೇಶ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಮಾನ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಆದೇಶದಲ್ಲಿ, ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆ ಒಬ್ಬರನ್ನು ಅನಾಗರಿಕವಾಗಿ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 12-12-2023 ರಂದು ಪತ್ರಿಕಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಲಾಗಿದ್ದು, ಪತ್ರಿಕಾ ಮಾಧ್ಯಮದವರು ಸಂತ್ರಸ್ತರ ಭಾವ ಚಿತ್ರಗಳನ್ನು ಮುಸುಕುಗೊಳಿಸಿ ಪ್ರಕಟಿಸಿರುತ್ತಾರೆ. ಆದರೆ ವಿದ್ಯುನ್ಮಾನ ವಾಹಿನಿಗಳಲ್ಲಿ ಸಂತ್ರಸ್ತರ ಗುರುತು ಬಹಿರಂಗವಾಗುವಂತೆ ಸುದ್ದಿ ಪ್ರಸಾರ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡು ಕೆಳಕಂಡಂತೆ ಪ್ರಸ್ತಾಪ ಮಾಡಿರುತ್ತಾರೆ.

In the aforesaid Circumstances, if any media house or its representatives has videographed the above interview of the victim during the visit of the Hon’ble Minister or any such interaction by the Victim, this Court hereby direct not to telecast such interview. It is further made clear that if already such interview is displayed or telecasted in the electronic media, henceforth there shall not be any display or telecast of the same.

ಮಾನ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳ ಆದೇಶವನ್ನು ಪಾಲಿಸುವ ಸಂಬಂಧವಾಗಿ, ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಆದೇಶದಲ್ಲಿ ತಿಳಿಸಿರುವಂತೆ ಎಲ್ಲಾ ಸುದ್ದಿ ಮಾಧ್ಯಮಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅದನ್ನು ಯಥಾವತ್ತಾಗಿ ಪಾಲಿಸುವಂತೆ ತಿಳಿಸಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸುದ್ದಿ ವಾಹಿನಿಗಳು ಮೇಲ್ಕಂಡ ವಿಷಯದ ಸುದ್ದಿಗಳನ್ನು ಮುದ್ರಿಸಿ/ಪ್ರಸಾರ/ಬಿತ್ತರಿಸಿದ್ದಲ್ಲಿ ಅಂತಹ ಮಾಧ್ಯಮಗಳೇ ಮುಂದಿನ ಆಗು ಹೋಗುಗಳಿಗೆ ಜವಾಬ್ದಾರರಾಗುತ್ತಾರೆ.

ತಮ್ಮ ವಿಶ್ವಾಸಿ.
(ಸಿ.ಆ‌ರ್.ನವೀನ್)
ಜಂಟಿ ನಿರ್ದೇಶಕರು.