ಸಕಲೇಶಪುರದಲ್ಲಿ ವರುಣಾರ್ಭಟ: ಬೇಸಿಗೆಯಲ್ಲೇ ಮಳೆಗಾಲದಂಥ ಮಳೆ!

ಹಾಸನ, ಏಪ್ರಿಲ್ 2:  ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿಯೇ ಮಳೆಗಾಲದಂತೆ ವರುಣನ ಅಬ್ಬರ ಆರಂಭವಾಗಿದೆ. ಸಕಲೇಶಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಸಕಲೇಶಪುರ ತಾಲ್ಲೂಕಿನ ಹಲವೆಡೆ ಬೆಳಿಗ್ಗೆಯಿಂದಲೇ ತುಂತುರು ಮಳೆ ಆಗುತ್ತಿದ್ದರೆ, ಮಧ್ಯಾಹ್ನದ ನಂತರ ಪಟ್ಟಣದಲ್ಲಿ ಜೋರು ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಸಕಲೇಶುರ ಪಟ್ಟಣದ ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ

ಸಕಲೇಶಪುರ ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿರುವುದರಿಂದ ಅಲ್ಲಿನ ಪ್ರಮುಖ ವಾಣಿಜ್ಯ ಚಟುವಟಿಕೆಯ ರಸ್ತೆಗಳಿಗೆ ನೀರು ನುಗ್ಗಿದೆ. ಅಜಾದ್ ರಸ್ತೆ, ಅಶೋಕ್ ರಸ್ತೆಯಲ್ಲಿನ ಕೆಲವು ಅಂಗಡಿಗಳಿಗೆ ಮಳೆನೀರು ನುಗ್ಗಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಪಟ್ಟಣದ ಕೆಲವೆಡೆ ಚರಂಡಿ ನೀರು ರಸ್ತೆಗೆ ಹರಿದು ವಾಹನ ಸವಾರರು ಮತ್ತು ನಾಗರಿಕರು ತೊಂದರೆ ಅನುಭವಿಸಿದರು.

ಹಾಸನ ಜಿಲ್ಲೆಯಲ್ಲಿ ಇನ್ನೂ ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.