ಹಾಸನ ಜಿಲ್ಲೆಯ ಮಲೆನಾಡು‌ ಭಾಗದಲ್ಲಿ ಮಳೆಯಬ್ಬರ; ಕತ್ತಲಲ್ಲಿ ಮುಳುಗಿದ ಹಳ್ಳಿಹಳ್ಳಿಗಳು ಗೆರೆ ಕುಸಿದು ಬೆಳೆನಾಶ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಭಾರಿ ಮಳೆಗೆ ಹಲವೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಳ್ಳಿಗಳು ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಲ್ಲಿ ಮುಳುಗಿವೆ.

ಸಕಲೇಶಪುರ ತಾಲ್ಲೂಕಿನ ಮಾವಿನೂರು, ಕಾಗಿನೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಭಾರೀ ಮಳೆಗೆ ಸಕಲೇಶಪುರ ತಾಲ್ಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಪುಟ್ಟೇಗೌಡ ಎಂಬವರ ಮನೆ ಕಾಂಪೌಂಡ್ ಕುಸಿದು ಬಿದ್ದಿದೆ. ಗ್ರಾಮದಲ್ಲಿ ಗದ್ದೆಗಳಿಗೆ ಮಣ್ಣು ಕುಸಿದಿದ್ದು ಭತ್ತದ ಸಸಿಗಳು ಕೆಸರಿನಲ್ಲಿ ಸಮಾಧಿಯಾಗಿವೆ. ಭತ್ತದ ಗದ್ದೆ‌ ಮೇಲೆ ಹಳ್ಳದ ನೀರು ಉಕ್ಕಿ ಹರಿಯುತ್ತಿದ್ದು ಬೆಳೆ ಮಣ್ಣುಪಾಲಾಗಿದೆ. ಗ್ರಾಮದ ಕೃಷಿಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.