ಹಾಸನ, ಮಾರ್ಚ್ 23: ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಸುರಿದ ಧಾರಾಕಾರ ಮಳೆ, ಬಿರುಗಾಳಿ, ಗುಡುಗು ಹಾಗೂ ಸಿಡಿಲಿನಿಂದಾಗಿ ಭಾರೀ ಹಾನಿ ಸಂಭವಿಸಿದೆ.
ಮುರಿದುಬಿದ್ದ ಬಾಳೆತೋಟ
ಈ ಮಳೆಯಿಂದಾಗಿ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅತ್ತಿಚೋಡೆನಹಳ್ಳಿ ಗ್ರಾಮದ ರೈತ ಲಿಂಗರಾಜು ಅವರ ಬಾಳೆ ತೋಟಕ್ಕೆ ಅಪಾರ ನಷ್ಟ ಉಂಟಾಗಿದೆ.ನಿನ್ನೆ ಸಂಜೆಯಿಂದ ರಾತ್ರಿವರೆಗೆ ಸುರಿದ ಗಾಳಿ ಮಳೆಗೆ ಲಿಂಗರಾಜು ಅವರಿಗೆ ಸೇರಿದ ಸುಮಾರು ಒಂದೂವರೆ ಸಾವಿರ ಬಾಳೆ ಗಿಡಗಳು ಗೊನೆ ಸಮೇತ ನೆಲಕಚ್ಚಿವೆ.

ಬಾಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವಾಗಲೇ ಈ ಘಟನೆ ಸಂಭವಿಸಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಲಿಂಗರಾಜು ಅವರಿಗೆ ತೀವ್ರ ನಷ್ಟವಾಗಿದೆ. ಈ ಘಟನೆಯಿಂದ ಅಂದಾಜು ಏಳು ಲಕ್ಷ ರೂಪಾಯಿಗಳ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಫಸಲಿಗೆ ಬಂದಿದ್ದ ಬೆಳೆ ಕೈತಪ್ಪಿದ್ದರಿಂದ ರೈತ ಲಿಂಗರಾಜು ಕಂಗಾಲಾಗಿದ್ದಾರೆ. ಮೊದಲ ಮಳೆಯೇ ತಮ್ಮ ಬೆಳೆಗೆ ಇಷ್ಟೊಂದು ಹಾನಿ ಮಾಡಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ. ಬೆಳೆ ನಷ್ಟಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಲಿಂಗರಾಜು ಒತ್ತಾಯಿಸಿದ್ದಾರೆ.
ಹಾರಿಹೋದ ಛಾವಣಿ ಹೆಂಚುಗಳು:
ಚನ್ನರಾಯಪಟ್ಟಣ ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರು ಬಿರುಗಾಳಿ ಸಹಿತ ಸುರಿದ ಮಳೆಗೆ ನಾಗರಾಜ್ ಎಂಬವರ ಮನೆಯ ಹೆಂಚುಗಳು ಉದುರಿವೆ. ಕೊಟ್ಟಿಗೆಯ ಮೇಲ್ಛಾವಣಿಯೇ ಹಾರಿ ಹೋಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ.
ಜಿಲ್ಲೆಯ ಇತರ ಭಾಗಗಳಲ್ಲೂ ಮಳೆಯಿಂದ ಸಣ್ಣಪುಟ್ಟ ಹಾನಿ ವರದಿಯಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಮೌಲ್ಯಮಾಪನ ಮಾಡುವ ಕೆಲಸ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.