ಹಾಸನ, ಆಲೂರು, ಸಕಲೇಶಪುರ ತಾಲೂಕುಗಳಲ್ಲಿ ಭರ್ಜರಿ ಮಳೆ: ಜನಜೀವನ ಅಸ್ತವ್ಯಸ್ತ- ರೈತರ ಮೊಗದಲ್ಲಿ ಮಂದಹಾಸ

ಹಾಸನ, ಏಪ್ರಿಲ್ 03: ಜಿಲ್ಲೆಯ ವಿವಿಧೆಡೆ ಗುರುವಾರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಾಸನ, ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಸಂಜೆ 4.30ರಿಂದ ಭಾರೀ ವರ್ಷಧಾರೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದಿಢೀರ್ ಬೇಸಿಗೆ ಮಳೆಯಿಂದ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಂಜೆ 5 ಗಂಟೆಯ ಉಪಗ್ರಹ ಚಿತ್ರ

ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಹಲವರು ಮಳೆಯಿಂದ ರಕ್ಷಣೆ ಪಡೆಯಲು ರಸ್ತೆ ಬದಿ ಕಟ್ಟಡಗಳ ಆಶ್ರಯ ಪಡೆಯುತ್ತಿದ್ದಾರೆ.

ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ವರ್ಷದ ಮುಂಗಾರು ಆರಂಭದಲ್ಲೇ ಒಳ್ಳೆಯ ಮಳೆಯಾಗುತ್ತಿರುವುದು ಕೃಷಿಕರಲ್ಲಿ ಆಶಾಭಾವನೆ ಹುಟ್ಟಿಸಿದೆ.

ಆದರೆ, ಇಂದಿನ ಧಾರಾಕಾರ ಮಳೆಯಿಂದಾಗಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೊಡಕು ಉಂಟಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.