ಕೇಸರಿ ಶಾಲು ಹಾಕಲು ಎಚ್.ಡಿ.ಕುಮಾರಸ್ವಾಮಿ‌ ಸಂಕೋಚಪಡಬೇಕಿಲ್ಲ: ದೇವೇಗೌಡರ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯೆ

ಹಾಸನ : ಎಚ್.ಡಿ.ಕೆ. ಕೇಸರಿ ಶಾಲು ಹಾಕಬಾರದಿತ್ತು ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಟಿ.ರವಿ, ಕೇಸರಿ ಶಾಲು ಹಾಕಿದ್ದಕ್ಕಾಗಿ ಕುಮಾರಸ್ವಾಮಿ ಸಂಕೋಚಪಡಬೇಕಿಲ್ಲ ಎಂದರು.

ಹಾಸನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಾರ್ಟಿಯ ಬಗ್ಗೆ ನಾವು ಕಾಮೆಂಟ್ಸ್ ಮಾಡುವುದಿಲ್ಲ. ಕೇಸರಿ ನಮ್ಮಲ್ಲೆರಿಗೂ ಪ್ರೇರಣೆ ಕೊಟ್ಟಿರುವ ಬಣ್ಣವಾಗಿದೆ.

ಕೇವಲ ಬಣ್ಣ ಮಾತ್ರ ಅಲ್ಲ, ಸಾವಿರ ವರ್ಷದ ಪರಂಪರೆ ಇದೆ. ಭಗವಾ ಎಂದರೆ ತ್ಯಾಗ, ಶೌರ್ಯ, ಕೋಟ್ಯಂತರ ಜನರಿಗೆ ವಿಶ್ವಾಸ ತುಂಬಿದೆ. ಗುರು ಗೋವಿಂದ ಸಿಂಗ್, ಶಿವಾಜಿ ಮಹಾರಾಜರು ಬಳಸಿದ್ದು ಭಗವಾ ಧ್ವಜವನ್ನೇ, ಮಹಾಭಾರತದಲ್ಲಿ ಅರ್ಜುನನ ಧ್ವಜ ಬಣ್ಣವೂ ಭಗವೇ ಇತ್ತು, ಅದು ತ್ಯಾಗದ ಸಂಕೇತವೂ ಹೌದು ಎಂದರು.

ಋಷಿಮುನಿಗಳು ಅದನ್ನು ತ್ಯಾಗದ ಸಂಕೇತವಾಗಿ ಬಳಸಿದ್ರೆ, ಕ್ಷತ್ರೀಯರು ಅದನ್ನು ಶೌರ್ಯದ ಸಂಕೇತವಾಗಿ ಬಳಸಿದರು. ಅದನ್ನು ಬಳಸಲು ನಮಗೇನೂ ಸಂಕೋಚ ಇಲ್ಲ, ನಮಗೆ ಹೆಮ್ಮೆ ಇದೆ, ಕುಮಾರಸ್ವಾಮಿ ಅವರೂ ಸಂಕೋಚ ಪಡಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದು ವಿರೋಧಿ ನೀತಿಯ ವಿರುದ್ಧ ಹಿಂದು ಸಂಘಟನೆಗಳು ಕೆರಗೋಡಿನಲ್ಲಿ ಪಾದಯಾತ್ರೆ ಆಯೋಜಿಸಿದ್ದರು. ಅಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ. ಅದು ಹಿಂದು ಸಂಘಟನೆಗಳು ಕರೆಕೊಟ್ಟ ಪಾದಯಾತ್ರೆಯಾಗಿತ್ತು ಎಂದರು.

ಕೇಸರಿ ಶಾಲು ಹಾಕಲು ಯಾರೂ ಸಂಕೋಚ ಪಡಬೇಕಾದ ಅವಶ್ಯಕತೆ ಇಲ್ಲ. ಭಗವಾ ಹಾಕುವುದರಿಂದ ನಮಗೆ ಕೆಟ್ಟದಾಗಲ್ಲ, ಒಳ್ಳೆಯದೇ ಆಗುತ್ತೆ ಎಂದರು.