ನಿಮ್ಮ ಆಶೀರ್ವಾದ ಬೇಕು ಅಂತ ಸರಿ ಇಲ್ಲದ ಪಕ್ಷದ ಹತ್ತಿರ ಯಾಕೆ ಬಂದಿದ್ದರು?; ಡಿಕೆಸು ಹೇಳಿಕೆಗೆ ರೇವಣ್ಣ ತಿರುಗೇಟು

ಅಲ್ಲಿ ವ್ಯಾಪಾರ ಆಗಲಿಲ್ಲ ಎಂದು ಇಲ್ಲಿಗೆ ಬಂದರು.

ಹಾಸನ: ದೇವೇಗೌಡರು, ಕುಮಾರಣ್ಣನ ಪಾದಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಡ್ತಿವಿ, ನಿಮ್ಮ ಆಶೀರ್ವಾದ ಬೇಕು, ಐದು ವರ್ಷ ನೀವೇ ಸಿಎಂ ಆಗಬೇಕು ಎಂದು ಡಿಕೆ ಬ್ರದರ್ಸ್ ನಮ್ಮ ಬಳಿ ಬಂದಿದ್ದೇಕೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾರ್ಮಿಕವಾಗಿ ಪ್ರಶ್ನಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸರಿಯಿಲ್ಲ ಎನ್ನುವ ಕಾರಣಕ್ಕಾಗಿ ಡಾ.ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ವ್ಯಂಗ್ಯ ಮಾಡಿದರು.

ಬಿಜೆಪಿ ರಾಷ್ಟ್ರೀಯ ಮುಖಂಡರು, ನಮ್ಮ ಪಕ್ಷದ ಮುಖಂಡರು ಕುಳಿತು‌ ಸಿ.ಎನ್.ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧಿಸಲಿ ಎಂದು ತೀರ್ಮಾನ ಮಾಡಿದ್ದಾರೆ.

ಮಂಜುನಾಥ್ ಅವರು ಒಳ್ಳೆಯ ಸೇವೆ ಮಾಡಿದ್ದಾರೆ. ಹದಿನೇಳು ವರ್ಷದಿಂದ ಅವರದ್ದೇ ಆದ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಚುನಾವಣೆಗೆ ನಿಲ್ಲಲೇಬೇಕು ಎಂದು ಎಲ್ಲರೂ ಒತ್ತಾಯ ಹೇರಿದರು. ಈಗ ಎಲ್ಲಾ ಕಡೆ ಅವರಿಗೆ ಸನ್ಮಾನ ಮಾಡುತ್ತಿದ್ದಾರೆ ಎಂದರು.

ಈ ಪಕ್ಷ ಸರಿ ಇಲ್ಲ ಎನ್ನುವುದಾದರೆ ಅವರು ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು ಕುಮಾರಣ್ಣ ನಿಮ್ಮ ಪಾದಗಳಿಗೆ ನಮಸ್ಕಾರಗಳು, ಐದು ವರ್ಷ ನೀವೇ ಸಿಎಂ ಎಂದರು. ನಿಮ್ಮ ಆಶೀರ್ವಾದ ಬೇಕು ಅಂತ ಸರಿಯಿಲ್ಲದ ಪಕ್ಷದ ಬಳಿ ಏಕೆ ಬರಲು ಹೋದರು ಎಂದು ಪ್ರಶ್ನಿಸಿದರು.

ಅಲ್ಲಿ ವ್ಯಾಪಾರ ಆಗಲಿಲ್ಲ ಎಂದು ಇಲ್ಲಿಗೆ ಬಂದರು. ದೇವೇಗೌಡರಿಗೆ ಇವೆಲ್ಲ ಅನುಭವವಿದೆ ಎಂದರು.