ಭೀಕರ ಬರದ ದವಡೆಗೆ ಜಾರುತ್ತಿದೆ ಹಾಸನ ಜಿಲ್ಲೆ; ಬರಿದಾಗುತ್ತಿದೆ ಹೇಮಾವತಿ ಜಲಾಶಯ, ತಾಪಕ್ಕೆ ಸತ್ತು ಬೀಳುತ್ತಿವೆ ಮೀನುಗಳು!

40 ಡಿಗ್ರಿ ದಾಟಿದ ತಾಪಮಾನಕ್ಕೆ ಜನ ಹೈರಾಣು

ಹಾಸನ: ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬರಗಾಲ ಎದುರಾಗಿದ್ದು, ಜಿಲ್ಲೆಯ ಜೀವನದಿ ಹೇಮಾವತಿ‌ ಜಲಾಶಯದ ಒಡಲು ಬರಿದಾಗಿ ರಾಶಿರಾಶಿ ಮೀನುಗಳು ಪ್ರಾಣಬಿಡುತ್ತಿವೆ.

 

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ದಿನೇ ದಿನೇ ಬತ್ತಿ ಹೋಗುತ್ತಿದೆ. ಹಾಸನ ನಗರದ 35 ವಾರ್ಡ್‌ಗಳಿಗೆ ಪ್ರತಿನಿತ್ಯ 30 ಎಂಎಲ್‌ಡಿ ಕುಡಿಯುವ ನೀರು ಬೇಕಿದೆ.  ಆದರೆ  ಅಣೆಕಟ್ಟೆಯಲ್ಲಿ ಕೇವಲ 10 ಟಿಎಂಸಿ ನೀರು‌ ಉಳಿದಿದೆ.

ಇದರಲ್ಲಿ ಕೇವಲ ಆರು ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ನಾಲ್ಕು ಟಿಎಂಸಿ ಡೆಡ್ ಸ್ಟೊರೇಜ್ ಬಳಸಲು ಸಾಧ್ಯವಿಲ್ಲ ಎನ್ನುವುದು ಚಿಂತೆಗೆ ಕಾರಣವಾಗಲಿದೆ.

ಮಳೆ ಬಾರದಿದ್ದಲ್ಲಿ ಹಾಸನ ನಗರ ನಿವಾಸಿಗಳಿಗೆ ಕುಡಿಯುವ ನೀರಿಗೆ ಸಂಕಟ ಎದುರಾಗಲಿದೆ. ಬಿಸಿಲ ಬೇಗೆಗೆ ಹೇಮಾವತಿ ಅಣೆಕಟ್ಟೆ ಹಿನ್ನೀರಿನಲ್ಲಿ ಪ್ರತಿನಿತ್ಯ ನೂರಾರು ಮೀನುಗಳು ಸಾಯುತ್ತಿವೆ.

 

ನದಿಯ ದಡದ ಸುತ್ತಲು ಸತ್ತು ಬಿದ್ದಿರುವ ನೂರಾರು ಮೀನುಗಳ ದುರ್ವಾಸನೆ ತುಂಬಿದೆ. ರಾಜ್ಯದ ವಿವಿಧೆಡೆ ಮೊದಲ‌ ಮಳೆ ಬಿದ್ದರೂ ಜಿಲ್ಲೆಯಲ್ಲಿ ಮಳೆ ಆಗಿಲ್ಲ.

ತೀವ್ರ ಬರಗಾಲ ಎದುರಿಸುತ್ತಿರುವ ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರುತ್ತಿದೆ. ಇದೇ ಮೊದಲ ಬಾರಿಗೆ ಬೇಲೂರು ತಾಲ್ಲೂಕಿನ, ಜಾವಗಲ್ ಹಾಗೂ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ.

ಬಿಸಿಲಿನ ತಾಪಕ್ಕೆ ಹಾಸನ ಜಿಲ್ಲೆಯ ಜನ ಹೈರಾಣಾಗುತ್ತಿದ್ದು, ಮಳೆ ಬಾರದಿದ್ದರೆ ಇನ್ನೂ ಹದಿನೈದು ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.

37.103 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಸದ್ಯ ಜಲಾಶಯದಲ್ಲಿ 10.387 ಟಿಎಂಸಿ ನೀರಿದೆ. ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿ, ಇಂದಿನ ಪ್ರಮಾಣ 2881.77 ಅಡಿ, ಕಳೆದ ವರ್ಷ ಇದೇ ದಿನದಂದು ಹೇಮಾವತಿ ನದಿಯಲ್ಲಿದ್ದ ನೀರು 19.902 ಟಿಎಂಸಿ, ಕಳೆದ ವರ್ಷ ಇದೇ ದಿನದಂದು ಇದ್ದಿದ್ದು 2900.33 ಅಡಿಗಳಷ್ಟು ನೀರು.