ಮುರಿದು ಬಿದ್ದ ಮರ, ವಿದ್ಯುತ್ ಕಂಬಗಳು, ಹಾರಿ ಹೋದ ಛಾವಣಿ; ಹಾಸನ ಜಿಲ್ಲೆಯಲ್ಲಿ ಮೊದಲ ಮಳೆಗೆ ಅಪಾರ ಪ್ರಮಾಣದ ಹಾನಿ

ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ವರ್ಷಧಾರೆ‌.

ಹಾಸನ; ಜಿಲ್ಲೆಯ ವಿವಿಧೆಡೆ ನಿನ್ನೆ ರಾತ್ರಿ ಸುರಿದ ಮೊದಲ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ ಸಕಲೇಶಪುರ ಭಾಗದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾರಿ ಮಳೆಗೆ ಮೂರು ಮನೆಗಳಿಗೆ ಹಾನಿಯಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾರಿ ಗಾಳಿಗೆ ಗ್ರಾಮದ ಸಲೀಂ, ಚಂದ್ರು ಎಂಬುವವರಿಗೆ ಸೇರಿದ ವಾಸದ ಮನೆಯ ಹೆಂಚುಗಳು ಹಾರಿ ಹೋಗಿದ್ದು, ಮನೆಯ ಒಳಗೆ ಮೇಲ್ಛಾವಣಿ ಮುರಿದು ಬಿದ್ದಿವೆ. ಇದೇ ಗ್ರಾಮದ ಜಾಕೋಬ್ ಪಿಂಟೊ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.

ಅದೃಷ್ಟವಶಾತ್ ಮನೆಯಲ್ಲಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ಮಳೆಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಭಾರಿ ಗಾಳಿ ಮಳೆಗೆ ಜನ್ನಾಪುರ-ಹಲಸುಲಿಗೆ ರಸ್ತೆಯಲ್ಲಿ ಮರ ಬಿದ್ದಿದ್ದು ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನ್ನಾಪುರ, ಹಲಸುಲಿಗೆ, ಮಾಗಡಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ರಾತ್ರಿಯಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.