ವರ್ಗಾವಣೆ ಆದೇಶಕ್ಕೆ ತಡೆ ತಂದ ಹಾಸನ ತಹಸಿಲ್ದಾರ್ ಶ್ವೇತಾ!

ಹಾಸನ: ಎಂಟು ತಿಂಗಳಿನಿಂದ ಹಾಸನ ತಾಲೂಕು ತಹಸಿಲ್ದಾರ್ ಹಾಗೂ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ವೇತ ಅವರನ್ನು ಶನಿವಾರ ಸರ್ಕಾರ ವರ್ಗಾವಣೆ ಮಾಡಿದ್ದು, ಅವಧಿ ಪೂರ್ವ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದ ಅವರಿಗೆ   ಇಂದು ವರ್ಗಾವಣೆಗೆ ತಡೆಯಾಜ್ಞೆ ಸಿಕ್ಕಿದೆ.

ವರ್ಗಾವಣೆ ಆದೇಶದ ವಿರುದ್ಧ ಕೆ ಎ ಟಿ ಮೊರೆ ಹೋಗಿದ್ದ ಶ್ವೇತ ಅವರು ವರ್ಗಾವಣೆಗೆ ತಡೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ಶ್ವೇತಾ ಅವರು ಗ್ರೇಡ್-೧ ತಹಸೀಲ್ದಾರ್ ಆಗಿದ್ದು, ಅವರ ಸ್ಥಾನಕ್ಕೆ ಗ್ರೇಡ್-೨ ತಹಸೀಲ್ದಾರ್‌ರನ್ನು ನಿಯೋಜನೆ ಮಾಡಿರುವುದು ಎಷ್ಟು ಸರಿ, ಇದು ಊರ್ಜಿತವೇ ಎಂದು ಶ್ವೇತಾ ಅವರ ಪರ ವಕೀಲರು ಕರ್ನಾಟಕ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಿದರು.ಈ ವಾದ ಹಾಗೂ ಮನವಿಯನ್ನು ಪುರಸ್ಕರಿಸಿದ ನ್ಯಾಯಮಂಡಳಿ ಶ್ವೇತಾ ಅವರ ವರ್ಗಾವಣೆಗೆ ತಡೆ ನೀಡಿದೆ.

ಇದರ ಮಧ್ಯೆ ನೂತನ ತಹಸಿಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ನವೀನ್ ಕುಮಾರ್ ಅವರು ಇಂದು ಬೆಳಗ್ಗೆ ನಗರದ ಎಂ.ಜಿ ರಸ್ತೆಯಲ್ಲಿರುವ ತಾಲೂಕು ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿ ನಂತರ ಜಿಲ್ಲಾ ಪಂಚಾಯತ್ ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ದಿಶಾ ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಸನಕ್ಕೆ ವರ್ಗಾವಣೆಗೊಂಡು ಬಂದಿದ್ದ ಶ್ವೇತ ಅವರು ವಿಧಾನಸಭಾ ಚುನಾವಣೆ,ಹಾಸನಾಂಬ ಉತ್ಸವ ಸೇರಿದಂತೆ ತಮಗೆ ವಹಿಸಲಾದ ಎಲ್ಲಾ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಶನಿವಾರ ಪ್ರಕಟಗೊಂಡ ಕಂದಾಯ ಇಲಾಖೆ ಅರ್ಜಿ ವಿಲೇವಾರಿ ಪಟ್ಟಿಯಲ್ಲಿ ಹಾಸನ ಜಿಲ್ಲೆ ಮೊದಲನೇ ಸ್ಥಾನ ಪಡೆದಿರುವ ಹಿಂದೆ ಶ್ವೇತ ಅವರ ಕಾರ್ಯವು ಬಹಳಷ್ಟು ಇರುವುದು ಗಮನಾರ್ಹ.

2014ನೇ ಬ್ಯಾಚ್ನಲ್ಲಿ ಕೆಎಎಸ್ ಪೇರ್ಗಡೆಗೊಂಡು ಗ್ರೇಡ್ ಒನ್ ತಾಸಿಲ್ದಾರ್ ಆಗಿ ಶ್ವೇತಾ ಆಯ್ಕೆಯಾಗಿದ್ದರು.
ಈಗ ಕೆಲವು ದಿನಗಳ ಹಿಂದಷ್ಟೇ ಚನ್ನರಾಯಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಸಿಲ್ದಾರ್ ಗೋವಿಂದರಾಜು ಅವರಿಗೂ ಸಹ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಮಾಡಿತ್ತು. ಆದರೆ ಅವರು ಸಹ ಕೆಎಟಿ ಮೊರೆ ಹೋಗಿ ಆದೇಶಕ್ಕೆ ತಡೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.