ಹಾಸನ ಮಹಾಮಳೆಯ ವಿಡಿಯೋ ವೀಕ್ಷಿಸಿ: ಧರೆಗುರುಳಿದ‌ ಮರಗಳು, ಕತ್ತಲಲ್ಲಿ ಮುಳುಗಿದ ಹಾಸನ- ಕೆರೆಯಾದ ರಸ್ತೆಗಳು- ಎಲ್ಲೆಲ್ಲೂ ಟ್ರಾಫಿಕ್ ಜಾಮ್

ಹಾಸನ: ನಗರದಲ್ಲಿ ಅಲ್ಪಸಮಯದಲ್ಲೇ ದಾಖಲೆ‌ ಪ್ರಮಾಣದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜನರು ತತ್ತರಿಸಿದ್ದಾರೆ. ಮರಗಳು ಉರುಳು ಬಿದ್ದು ನಗರದ ಬಹುತೇಕ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆಗಳು ಕೆರೆಯಂತಾಗಿವೆ.

ಹಾಸನ ನಗರದ ಹೌಸಿಂಗ್ ಬೋರ್ಡ್, ಕುವೆಂಪುನಗರ, ಕೆ.ಆರ್.ಪುರಂನಲ್ಲಿ ಮರಗಳು ಧರಾಶಾಹಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

ಮಳೆಗೆ ರಸ್ತೆಯಲ್ಲಿ ಹರಿಯುತ್ತಿರುವ ಭಾರಿ ಪ್ರಮಾಣದ ನೀರು ರಸ್ತೆಗಳನ್ನು ಕೆರೆಯಾಗಿಸಿದೆ. ಬಿಎಂ ರಸ್ತೆಯ ಬಿಎಸ್ಎನ್ಎಲ್ ಭವನದ ಎದುರಿನ ರಸ್ತೆಯಲ್ಲಿ ನಾಲ್ಕೈದು ಅಡಿಗಳಷ್ಟು ನೀರು ಹರಿಯುತ್ತಿದ್ದು ಅಲ್ಲಿ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿವೆ.

ನೀರಿನಲ್ಲಿ ಸಿಲುಕಿ ಕೆಟ್ಟು ನಿಂತ ಆಟೋವನ್ನು ಮಹಿಳಾ ಪ್ರಯಾಣಿಕರು ಡ್ರೈವರ್ ಜತೆ ಸೇರಿ ತಳ್ಳಿ ರಸ್ತೆಗೆ ತಂದ ಘಟನೆಯೂ ನಡೆಯಿತು. ರಸ್ತೆಗಳು ವಿದ್ಯುತ್ ಕಡಿತದಿಂದ ಕತ್ತಲಲ್ಲಿ ಮುಳುಗಿದ್ದು ನೀರು ಸಂಗ್ರಹವಾಗಿರುವುದರಿಂದ ವಾಹನಗಳ ಸರಾಗ ಸಂಚಾರ ಸಾಧ್ಯವಾಗದೇ ಎಲ್ಲೆಡೆ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿದೆ.