ಹಾಸನ, ಆಲೂರು ತಾಲೂಕುಗಳಲ್ಲಿ ವರುಣಾರ್ಭಟ: ಶೆಟ್ಟಿಹಳ್ಳಿ-ಮಗ್ಗೆ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿದ್ದ ಬಿದ್ದ ಮರದ ಕೊಂಬೆಗಳು-ವಾಹನ ಸವಾರರ ಪರದಾಟ

ಹಾಸನ: ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವರುಣನ ಅಬ್ಬರಕ್ಕೆ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ಹಾಸನ ಮತ್ತು ಆಲೂರು ತಾಲ್ಲೂಕುಗಳಲ್ಲಿ ಬಿರುಗಾಳಿ ಸಹಿತ ಭಾರೀ ವರ್ಷಧಾರೆಯಾಗಿದೆ.

ಇದರಿಂದಾಗಿ ಹಲವೆಡೆ ಮರದ ಕೊಂಬೆಗಳು ಮುರಿದು ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿವೆ. ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸಮೀಪದ ಶೆಟ್ಟಿಹಳ್ಳಿ-ಮಗ್ಗೆ ಮಾರ್ಗದ ರಸ್ತೆಯಲ್ಲಿ ಎರಡು ದೊಡ್ಡ ಮರದ ಕೊಂಬೆಗಳು ಮುರಿದು ಬಿದ್ದಿರುವ ಘಟನೆ ವರದಿಯಾಗಿದೆ.

ಈ ಪರಿಣಾಮದಿಂದ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನ ಸವಾರರು ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿಕೊಂಡು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಲೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿಯೂ ಸಹ ಭಾರೀ ಮಳೆಯಿಂದಾಗಿ ಮರಗಳು ಮತ್ತು ಕೊಂಬೆಗಳು ಮುರಿದು ಬಿದ್ದಿರುವ ಕುರಿತು ಮಾಹಿತಿ ಲಭ್ಯವಾಗಿದೆ