ಹಾಸನ- ಬೆಂಗಳೂರು ನಡುವೆ ಹೊಸ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸಿ: ರೈಲ್ವೆ ಸಚಿವರಿಗೆ ಮನವಿ ನೀಡಿದ ಸಂಸದ ಶ್ರೇಯಸ್ ಪಟೇಲ್

ಹಾಸನದಲ್ಲಿ ಒಂದು ಟೆಕ್ನಾಲಜಿ ಪಾರ್ಕ್ ಸ್ಥಾಪಿಸಿ| ಹಾಸನ ರೈಲ್ವೆ‌ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಿ|ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ, ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ಕುಶಾಲನಗರ ಮೂಲಕ ಹಾದು ಹೋಗುವಂತೆ ಹೊಸ ರೈಲ್ವೆ‌ ಮಾರ್ಗ ಸ್ಥಾಪಿಸಿ|

ನವದೆಹಲಿ: ಹಾಸನ- ಬೆಂಗಳೂರು ನಡುವೆ ಹೊಸ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸುವಂತೆ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನವದೆಹಲಿಯಲ್ಲಿಂದು ರೈಲ್ವೆ ಸಚಿವರನ್ನು ಭೇಟಿಯಾದ ಸಂಸದರು, ಮನವಿ ಪತ್ರ ಸಲ್ಲಿಸಿದರು.

ಬೆಳಿಗ್ಗೆ 9 ರಿಂದ 10ರ ನಡುವೆ ಹಾಸನದಿಂದ ಹೊರಡುವ ರೈಲು ಸೇವೆ ಆರಂಭಿಸಿದರೆ ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಪ್ರಸ್ತುತ ಲಭ್ಯವಿರುವ ರೈಲುಗಳು ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಮತ್ತು ರಸ್ತೆ ಸಂಚಾರದ ದಟ್ಟಣೆ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ಈ ಹೊಸ ರೈಲು ಸೇವೆ ಅಗತ್ಯವೆಂದು ಅವರು ಮನವಿ ಮಾಡಿದ್ದಾರೆ.

ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಲು, ಮತ್ತು ಹಾಸನ-ಬೆಂಗಳೂರು ನಡುವಿನ ಸಂಪರ್ಕ ಸುಧಾರಿಸಲು ಅವರು ರೈಲ್ವೆ ಸಚಿವರನ್ನು ಒತ್ತಾಯಿಸಿದರು.

ಹಾಸನದ ಭೂ ಪ್ರದೇಶ ಐಟಿ ಉದ್ಯಮಕ್ಕೂ ಪೂರಕವಾಗಿದ್ದು, ಕರ್ನಾಟಕದ ರಾಜಧಾಗಿ ಬೆಂಗಳೂರಿಗೆ ಸನಿಹದಲ್ಲಿದೆ. ಇಲ್ಲಿ ಕುಶಲ ಉದ್ಯೋಗಿಗಳು, ಸಂಪನ್ಮೂಲಗಳ ಲಭ್ಯತೆಯೂ ಹೇರಳವಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಹಾಸನದಲ್ಲಿ ಒಂದು ಟೆಕ್ನಾಲಜಿ ಪಾರ್ಕ್ ಸ್ಥಾಪಿಸುವಂತೆ ಇದೇ ವೇಳೆ ಬೇಡಿಕೆ ಸಲ್ಲಿಸಿದರು.

ಹಾಸನದ ಹೊಸ ಬಸ್ ನಿಲ್ದಾಣ ಎದುರಿನ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಶೀಘ್ರವೇ ಮುಗಿಸಿಕೊಡುವಂತೆ ಸಂಸದರು ಕೇಂದ್ರ ಸಚಿವರ ಗಮನ ಸೆಳೆದರು.

ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ, ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ಕುಶಾಲನಗರ ಮೂಲಕ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹೊಸದಾಗಿ ರೈಲ್ವೇ ವ್ಯವಸ್ಥೆ ಕಲ್ಪಿಸಿ, ಆ ಮೂಲಕ ಸಾವಿರಾರು ಪ್ರಯಾಣಿಕರಿಗೆ ರೈಲ್ವೆ ಸಂಚಾರಕ್ಕೆ ಪ್ರಯೋಜನ ಒದಗಿಸುವಂತೆ ಮನವಿ ಮಾಡಿದರು.
ಹೊಳೆನರಸೀಪುರದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ, ಮೈಸೂರು ಮೂಲಕ ಅರಸೀಕೆರೆ – ಹೊಳೆನರಸೀಪುರಕ್ಕೆ ಬೆಳಗ್ಗೆ ಡೆಮೊ ರೈಲು ಸೇವೆಗೆ ಅನುಮತಿ ನೀಡುವಂತೆ ಸಚಿವರಲ್ಲಿ ಸಂಸದರು ಕೋರಿದರು.

ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.