ಮಾರಾಟವಾಗದ ಹಾಮೂಲ್ ನ 122 ಕೋಟಿ ರೂ. ಮೌಲ್ಯದ ಬೆಣ್ಣೆ, ತುಪ್ಪ; ಕೆಎಂಎಫ್ ನಡೆಗೆ ಎಚ್.ಡಿ.ರೇವಣ್ಣ ಅಸಮಾಧಾನ

ಬೆಂಗಳೂರು ಮಾರುಕಟ್ಟೆಯಲ್ಲಿ ಹಾಲು ಮಾರಾಟಕ್ಕೆ ಅವಕಾಶ ನೀಡದ ಕೆಎಂಎಫ್ | ಹಾಮೂಲ್ ಗೆ ಅಡ್ಡಿ ಬೇಡ

ಹಾಸನ: ಹಾಸನ ಹಾಲು ಒಕ್ಕೂಟ ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳು ಮಾರಾಟವಾಗದೇ ನಷ್ಟ ಅನುಭವಿಸುತ್ತಿದ್ದು, ಉತ್ಪಾದಕರಿಗೆ ಮೂರು ವಾರಗಳ ಬಟವಾಡೆ ನೀಡಲು ಸಾಧ್ಯವಾಗಿಲ್ಲ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹಾಮೂಲ್ ಡೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಕ್ಕೂಟದಲ್ಲಿ ಪ್ರತಿ ದಿನ 4 ರಿಂದ 4.5 ಲಕ್ಷ ಲೀ. ಹಾಲನ್ನು ಪರಿವರ್ತನೆಗೆ ಕಳುಹಿಸಿಕೊಡುತ್ತಿದೆ. ಪರಿವರ್ತಿತ ಉತ್ಪನ್ನಗಳು ಮಾರಾಟವಾಗದೆ 3800 ಮೆ.ಟನ್ ಎಸ್.ಎಂ.ಪಿ. ದಾಸ್ತಾನು ಹಾಗೂ 1246 ಮೆ. ಟನ್ ಬೆಣ್ಣೆ ದಾಸ್ತಾನು ಉಳಿದಿದೆ.

ಇವುಗಳ ಮೌಲ್ಯ ಒಟ್ಟು ರೂ. 122.0 ಕೋಟಿ ರೂ. ಆಗಿದ್ದು, ಈ ರೀತಿ ದಾಸ್ತಾನು ಮಾರಾಟವಾಗದೇ ಒಕ್ಕೂಟ ನಷ್ಟ ಅನುಭವಿಸುತ್ತಿದೆ. ಉತ್ಪಾದಕರಿಗೆ 3 ವಾರದ ಬಟವಾಡೆ ನೀಡಲು ಬಾಕಿ ಇದ್ದು, ಒಕ್ಕೂಟವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದರು.

ವಾರ್ಷಿಕ ಹಾಮೂಲ್, ಕೆಎಂಎಫ್ ಗೆ 15 ಕೋಟಿ ರೂ. ಲೆವಿ ಪಾವತಿಸುತ್ತಿದೆ. ನಷ್ಟದ ಅನುಭವಿಸುತ್ತಿರುವುದರಿಂದ ಉತ್ಪನ್ನಗಳ ಮಾರಾಟದ ಮೇಲೆ ಕೆ.ಎಂ.ಎಫ್. ವಿಧಿಸುತ್ತಿರುವ ಶೇ. 6 ರ ಮಾರಾಟ ಲೆವಿಯನ್ನು ಕೆಲವು ತಿಂಗಳುಗಳವರೆಗೆ ಕೈಬಿಡಲು ಕೆ.ಎಂ.ಎಫ್.ಗೆ ಕೋರಿಕೆ ಸಲ್ಲಿಸಲಾಗುವುದು ಎಂದರು.