ಅಣ್ಣ ಡಿಕೆಶಿ ಸಿಎಂ ಆಗಬೇಕು ಎನ್ನುವ ಡಿಕೆಸು ಆಸೆಯಲ್ಲಿ ತಪ್ಪೇನೂ ಇಲ್ಲ, ಆದ್ರೆ ಸಿಎಂ ಸ್ಥಾನ ಖಾಲಿಯಾದ ಮೇಲೆ ತಾನೇ ಆ ಬಗ್ಗೆ ಮಾತು?: ಕೆ.ಎನ್.ರಾಜಣ್ಣ

ಹಾಸನ: “ಅಣ್ಣ ಸಿಎಂ ಆಗಬೇಕು ಎನ್ನುವ ಆಸೆ ನನಗಿದೆ” ಎಂಬ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು “ಅದರಲ್ಲಿ ತಪ್ಪೇನಿದೆ? ಯಾರಿಗೆ ಆಸೆ ಇರಲ್ಲ? ಎಲ್ಲರಿಗೂ ಆಸೆ ಇರುತ್ತದೆ” ಎಂದು ತಮ್ಮ ನೇರ ಪ್ರತಿಕ್ರಿಯೆ ನೀಡಿದ್ದಾರೆ.

“ಅಣ್ಣನನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದರಲ್ಲಿ ತಪ್ಪೇನಿದೆ? ಅದರಲ್ಲಿ ಏನೂ ತಪ್ಪಿಲ್ಲ” ಎಂದ ಅವರು, “ಆದರೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ ಸ್ಥಾನ ಖಾಲಿಯಾದ ಮೇಲೆ ತಾನೇ ಆ ವಿಚಾರ” ಎಂದರು.

“ತಪ್ಪು ಹುಡುಕುವ ಕೆಲಸ ನಾವು ಮಾಡಬಾರದು. ಮನುಷ್ಯನಿಗೆ ಆಸೆ ಅನ್ನುವುದು ಇದ್ದೇ ಇರಬೇಕು. ಆಸೆ ಇದ್ದರೇ ಜೀವನ ಸಾಗಿಸಲು ಶಕ್ತಿ ಬರುವುದು. ಆಸೆ ಇಲ್ಲ ಅಂದರೆ ಅವನು ಸನ್ಯಾಸಿಯಾಗ್ತಾನೆ” ಎಂದರು.

ಬಿಜೆಪಿಯಿಂದ ಡಿ.ಕೆ. ಶಿವಕುಮಾರ್‌ಗೆ ಆಹ್ವಾನ?

ಬಿಜೆಪಿ ಶಾಸಕ ಸುರೇಶ್‌ಗೌಡ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, “ಸುರೇಶ್‌ಗೌಡ ಹಿಂಭಾರನೂ ಅಲ್ಲ, ಮುಂಭಾರನೂ ಅಲ್ಲ. ಏಕೆ ಅವರ ಬಗ್ಗೆ ಮಾತಾಡುತ್ತೀರಾ?” ಎಂದು ಪ್ರಶ್ನಿಸಿದರು.

“ಸುರೇಶ್‌ಗೌಡ ನನ್ನ ಸ್ನೇಹಿತನೇ, ಆ ಪ್ರಶ್ನೆ ಬೇರೆ. ಅವರು ಬಿಜೆಪಿಗೆ ಆಹ್ವಾನ ಮಾಡಿದರೆ ಇವರು ಹೋಗ್ತಾರಾ? ನಾನು ಸುರೇಶ್‌ಗೌಡನನ್ನು ಕಾಂಗ್ರೆಸ್‌ಗೆ ಬಾ ಅಂತ ಕರೆದಿದ್ದೆ. ಅವರು ನನ್ನ ಮುಂದೆ ಒಪ್ಪಿಕೊಂಡಿದ್ದರು – ‘ಬರ್ತೀನಿ’ ಅಂತ. ಆದರೆ ಕೊನೆಗೂ ಬಿಟ್ಟುಹೋದರು. ಏನು ಮಾಡೋದು? ರಾಜಕೀಯ ಅವರವರ ಇಷ್ಟ” ಎಂದರು.