ಹೇಮಾವತಿ ನದಿ ಒಡಲು ಬಗೆಯುತ್ತಿರುವ ಅಕ್ರಮ ಮರಳು ದಂಧೆಕೋರರು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಹಾಸನ: ರಾಜ್ಯ ಸರ್ಕಾರದ ಮರಳು ನೀತಿ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಹೇಮಾವತಿ ನದಿಯ ಒಡಲನ್ನೇ ಬಗೆದು, ಹಗಲು-ರಾತ್ರಿ ಎನ್ನದೆ ಮರಳನ್ನು ತೆಗೆದು ಸಾಗಿಸುತ್ತಿರುವ ದಂಧೆಕೋರರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವರದಂತಾಗಿದೆ.

ಅಕ್ರಮವಾಗಿ ಸಂಗ್ರಹಿಸಿರುವ ಮರಳು

ಆಾಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ, ಕಿತ್ತನಕೆರೆ, ಕಿತ್ತಗಳ್ಳಲೆ, ಬಿಗತ್ತೂರು ಹಾಗೂ ಸಕಲೇಶಪುರ ತಾಲ್ಲೂಕಿನ ವಡೂರು, ಯಸಳೂರು ಪ್ರದೇಶಗಳಲ್ಲಿ ಈ ಅಕ್ರಮ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ದಂಧೆಕೋರರು ಯಾವುದೇ ಭಯವಿಲ್ಲದೆ ಮರಳನ್ನು ತೆಗೆದು ಸಾಗಾಣಿಕೆ ಮಾಡುತ್ತಿದ್ದಾರೆ. ನದಿಪಾತ್ರದಲ್ಲಿ ಓಡಾಡಿದರೆ ಸಾಕು ಅಕ್ರಮವಾಗಿ ಗಣಿಗಾರಿಕೆ ನಡೆಸಿ ತೆಗೆದಿರುವ ಮರಳು ದಾಸ್ತಾನು ಕಣ್ಣಿಗೆ ಬೀಳುತ್ತದೆ.

ಇದಕ್ಕೆ ಕೆಲವು ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಈ ಅಕ್ರಮ ಮರಳು ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದರೂ, ಪೊಲೀಸ್ ಹಾಗೂ ಗಣಿಗಾರಿಕೆ ಇಲಾಖೆಗಳು ಕಡಿವಾಣ ಹಾಕುವ ಬದಲು ಕುಂಭಕರ್ಣನಂತೆ ನಿದ್ರಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜತೆಗೆ, ಅಕ್ರಮ ಚಟುವಟಿಕೆಯನ್ನು ಪ್ರಶ್ನಿಸುವವರ ಮೇಲೆ ದಂಧೆಕೋರರು ಹಲ್ಲೆ ನಡೆಸಿದ ಘಟನೆಗಳೂ ನಡೆದಿವೆ ಎ‌ನ್ನಲಾಗುತ್ತಿದ್ದು ಹೇಮಾವತಿ ನದಿಯಲ್ಲಿ ಮರಳು ಗಣಿಗಾರಿಕೆಯ ಮಿತಿಮೀರಿರುವುದು ಪರಿಸರಕ್ಕೂ ಭಾರೀ ಹಾನಿಕಾರಕವಾಗಿದ್ದು ಈ ಬಗ್ಗೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.