ಹಾಸನದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ಬೂಕರ್ ಪ್ರಶಸ್ತಿ ಹೊಸ್ತಿಲಲ್ಲಿ: ಲಾಂಗ್ ಲಿಸ್ಟ್ ನಲ್ಲಿ ‘ಹಾರ್ಟ್ ಲ್ಯಾಂಪ್’

ಕನ್ನಡದ ಅನುವಾದಿತ ಕೃತಿಯೊಂದು ಈ ಪ್ರಶಸ್ತಿಯ ರೇಸ್‌ನಲ್ಲಿರುವುದು ಇದೇ ಮೊದಲು.

ಲಂಡನ್ (ಪಿಟಿಐ): ಹಾಸನ ಮೂಲದ ಖ್ಯಾತ ಸಾಹಿತಿ, ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲೆ ಬಾನು ಮುಷ್ತಾಕ್ ಅವರ ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್‘ ಲಂಡನ್‌ನಲ್ಲಿನಡೆಯಲ್ಲಿ ರುವ 2025ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಲಾಂಗ್ ಲಿಸ್ಟ್‌ನಲ್ಲಿ ಸೇರ್ಪಡೆ ಯಾಗಿದೆ.

ಬಾನು ಮುಷ್ತಾಕ್ ಅವರ ‘ಹಸಿನಾ ಮತ್ತು ಇತರ ಕತೆಗಳು‘ ಕೃತಿಯನ್ನು  ಪತ್ರಕರ್ತೆ ದೀಪಾ ಭಕ್ತಿಯವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ವಿಶ್ವಾದ್ಯಂತ ಆಯ್ಕೆಯಾದ 13 ಕೃತಿಗಳಲ್ಲಿ ಒಂದಾಗಿರುವ ಬಾನು ಅವರ ಕೃತಿಯು ಕುಟುಂಬ ಮತ್ತು ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಉದ್ವಿಗ್ನತೆಗಳನ್ನು ಚಿತ್ರಿಸಿದೆ. ಈ ಕೃತಿ 2024ರಲ್ಲಿ ದಿ ಇಂಗ್ಲಿಷ್ ಪೆನ್ ಪ್ರಶಸ್ತಿ ಪಡೆದಿತ್ತು.

ಕೃತಿಯ ಚಮತ್ಕಾರಿ, ಹೃದಯಸ್ಪರ್ಶಿ ಮತ್ತು ರೋಮಾಂಚಕ ಶೈಲಿ ನಿರ್ಣಾಯಕರನ್ನು ಆಕರ್ಷಿಸಿದೆ ಎನ್ನಲಾಗಿದೆ. ಕನ್ನಡದ ಅನುವಾದಿತ ಕೃತಿಯೊಂದು ಈ ಪ್ರಶಸ್ತಿಯ ರೇಸ್‌ನಲ್ಲಿರುವುದು ಇದೇ ಮೊದಲು.

ಹಾರ್ಟ್ ಲ್ಯಾಂಪ್ ಕೃತಿಯಲ್ಲಿ 12 ಸಣ್ಣ ಕಥೆಗಳಿವೆ. ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಅಂತರಂಗವನ್ನು ಲೇಖಕಿ ಅಪರೂಪದ ಕಥೆಗಳ ಮೂಲಕ ತೆರೆದಿಟ್ಟಿದ್ದಾರೆ. ಕೃತಿಯ ಕುರಿತು ಮಾತನಾಡಿರುವ 2025ರ ಬೂಕರ್‌ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್, ‘ಈ ಕೃತಿಯು ನಮ್ಮ ನಮ್ಮ ನಡುವೆ ನಿರ್ಮಾಣವಾಗಿರುವ ಗಡಿಗಳನ್ನು ಧಿಕ್ಕರಿಸಲು ಒಂದು ಅದ್ಭುತ ಮಾರ್ಗವಾಗಿದೆ’ ಎಂದಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಲಾಂಗ್‌ಲಿಸ್ಟ್‌ನಲ್ಲಿರುವ 13 ಕೃತಿಗಳ ಪೈಕಿ 6 ಕೃತಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಿ ಏ.8ರಂದು ಪಟ್ಟಿ ಘೋಷಿಸಲಾಗುತ್ತದೆ. ಈ ಸುತ್ತಿಗೆ ಆಯ್ಕೆಯಾದ ಪ್ರತಿ ಕೃತಿಗೆ 5,51,387 ರು. ಬಹುಮಾನ ಮೊತ್ತ ಸಿಗಲಿದೆ. ಇದು ಲೇಖಕ ಮತ್ತು ಅನುವಾದಕ ಇಬ್ಬರಿಗೂ ಹಂಚಿಕೆಯಾಗುತ್ತದೆ.

ಎರಡನೇ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಅಂತಿಮವಾಗಿ ಒಂದು ಕೃತಿಗೆ 2025ನೇ ಸಾಲಿನ ಬೂಕರ್‌ಪ್ರಶಸ್ತಿ ಘೋಷಿಸಲಾಗುತ್ತದೆ. ಮೇ 20ರಂದು ಲಂಡನ್‌ನ ಟೇಟ್ ಮಾಡರ್ನ್‌ಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯ ಘೋಷಣೆ ನಡೆಯಲಿದೆ. ವಿಜೇತ ಲೇಖಕರಿಗೆ ಮತ್ತು ಅನುವಾದಕರಿಗೆ ತಲಾ 27,58,110 ರು. ಬಹುಮಾನ ಸಿಗಲಿದೆ.

ಜಾಹೀರಾತು