ಹಾಸನಾಂಬೆ ದೇವಾಲಯದಲ್ಲಿ ಎಲ್ಲ ಶಿಷ್ಟಾಚಾರ ದರ್ಶನ ಬಂದ್!

ಹಾಸನ: ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿರುವುದರಿಂದ ಆಗುತ್ತಿರುವ ಅನಾನುಕೂಲ ತಪ್ಪಿಸಲು ದೇವಾಲಯದ ಆಡಳಿತಾಧಿಕಾರಿ ಶಿಷ್ಟಾಚಾರ ದರ್ಶನವನ್ನೇ ರದ್ದುಪಡಿಸಿದ್ದಾರೆ.

ಈ ಸಂಬಂಧ ಆದೇಶ ಹೊರಡಿಸಿರುವ ಹಾಸನ ಉಪವಿಭಾಗಾಧಿಕಾರಿಯೂ ಆಗಿರುವ ಮಾರುತಿ, ಧರ್ಮದರ್ಶನದ ಸಾಲಿನಲ್ಲಿ ಅಧಿಕ ಭಕ್ತಾಧಿಗಳು ಆಗಮಿಸುತ್ತಿರುವುದರಿಂದ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹಾಸನಾಂಬೆ ದೇವಾಲಯದ ಎಲ್ಲ ಶಿಷ್ಟಾಚಾರ ದರ್ಶನ ವ್ಯವಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂತ್ಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಗರ್ಭಗುಡಿಗೆ ಪ್ರವೇಶಿಸಿ ಅರ್ಚನೆ, ಪೂಜೆ ಮಾಡಿಸುವ ಅತಿಗಣ್ಯರಿಗೆ ಸೀಮಿತವಾಗಿದ್ದ ವ್ಯವಸ್ಥೆಗೂ ಮಂಗಳ ಹಾಡಲಾಗಿದ್ದು, ಗರ್ಭಗುಡಿಗೆ ಅರ್ಚಕರ ಹೊರತುಪಡಿಸಿ ಯಾರಿಗೂ ಪ್ರವೇಶ ಇಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಾರದ ದಿನಗಳಲ್ಲಿಯೇ ಭಕ್ತರನ್ನು ನಿಯಂತ್ರಿಸಿ ದರ್ಶನ ಮಾಡಿಸಲು ಪರದಾಡುತ್ತಿದ್ದ ಆಡಳಿತ, ವಾರಾಂತ್ಯದಲ್ಲಿ ಎದುರಾಗಬಹುದಾದ ಸಂಕಷ್ಟದಿಂದ ಪಾರಾಗಲೂ ಶ್ಲಾಘನೀಯ ನಿರ್ಧಾರ ಕೈಗೊಂಡಿದೆ.