ಹಾಸನ: ಮಲೆನಾಡಿನಲ್ಲಿ ಭಾರೀ ಮಳೆ – ಹಾನುಬಾಳಿನಲ್ಲಿ ಕುಸಿದ ಛಾವಣಿ, ವಾಹನಗಳು ಜಖಂ, ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಹಾಸನ, ಏಪ್ರಿಲ್ 05:  ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದಾಗಿ ಹಲವೆಡೆ ಹಾನಿ ಸಂಭವಿಸಿದೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮದ  ವೃತ್ತದಲ್ಲಿ ಒಂದು ವಾಣಿಜ್ಯ ಮಳಿಗೆಯ ಶೀಟ್  ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಆರಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಮೇಲ್ಛಾವಣಿ ಕೆಳಗೆ ನಿಂತಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಸಿದ ಮೇಲ್ಛಾವಣಿಯಡಿ ಬೇಕರಿ, ಪ್ರಾವಿಜನ್ ಸ್ಟೋರ್ ಮತ್ತು ಹಾರ್ಡ್‌ವೇರ್ ಅಂಗಡಿಗಳಿದ್ದವು. ಮಳೆಯಿಂದ ಆಶ್ರಯ ಪಡೆಯಲು ಈ ಅಂಗಡಿಗಳ ಕೆಳಗೆ ನಿಂತಿದ್ದ ಹತ್ತಾರು ಮಂದಿ, ಮೇಲ್ಛಾವಣಿ ಕುಸಿಯುತ್ತಿದ್ದಂತೆ ಓಡಿ ತಪ್ಪಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದಾಗಿ ಮೇಲ್ಛಾವಣಿ ಒಡೆದು ಕುಸಿದಿದೆ.  ಕೆಳಗೆ ನಿಲ್ಲಿಸಿದ್ವಾದಹನಗಳು ಸಂಪೂರ್ಣ ಜಖಂಗೊಂಡಿವೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯ ಆರಂಭಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಕುಸಿದ ಮೇಲ್ಛಾವಣಿಯ ಭಾಗಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.