ಹಾಸನ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ; ಚಾಕೊಲೇಟ್ ಕೊಡುತ್ತೇನೆಂದು ಬಂದ ನೆರೆಮನೆಯ ಕೀಚಕನಿಂದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ

ಹಾಸನ: ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ನೆರೆಮನೆಯ ನಿವಾಸಿಯೇ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬೇಲೂರು ತಾಲೂಕಿನಲ್ಲಿ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಮಧ್ಯಾಹ್ನ ಬೀಗರ ಔತಣವೊಂದಕ್ಕೆ ಹೋಗಿದ್ದರು. ಆ ಸಮಯದಲ್ಲಿ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಳು.

ಆಗ ನೆರೆಮನೆಯಾತ ಚಾಕೊಲೇಟ್ ಕೊಡುವ ನೆಪದಲ್ಲಿ ಬಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಏನೂ ನಡೆದೇ ಇಲ್ಲ ಎಂಬಂತೆ ತನ್ನ ಮನೆಯಲ್ಲೇ ಇದ್ದನು.

ಬಾಲಕಿ ಪೋಷಕರು ಮನೆಗೆ ಮರಳಿದಾಗ ಬಾಲಕಿಯ ವರ್ತನೆ ಬದಲಾಗಿದ್ದನ್ನು ಹಾಗೂ ಆಕೆ ನೋವು ಅನುಭವಿಸುತ್ತಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಅತ್ಯಾಚರವಾಗಿರುವುದು ಗೊತ್ತಾಗಿದೆ.

ತಾನು ಎಸಗಿರುವ ಪೈಶಾಚಿಕ ಕೃತ್ಯ ಬಹಿರಂಗವಾದ ತಕ್ಷಣ ಎರಡು ಮಕ್ಕಳ ತಂದೆಯಾಗಿರುವ ಆರೋಪಿ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.

ಹಳೇಬೀಡು ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.