ಹಾಸನಾಂಬೆ ಧರ್ಮ ದರ್ಶನಕ್ಕೆ 10. 8ಕಿಮೀ. ಕ್ಯೂ!

ಹತ್ತು ಲಕ್ಷ ಭಕ್ತರ ನಿರೀಕ್ಷೆ ಹಿನ್ನೆಲೆಯಲ್ಲಿ ಸಿದ್ಧತೆ ಕೈಗೊಂಡಿರುವ ಜಿಲ್ಲಾಡಳಿತ

ಹಾಸನ: ಈ ಬಾರಿ ಹಾಸನಾಂಬೆ ಧರ್ಮ ದರ್ಶನ ಪಡೆಯಬೇಕಿದ್ದರೆ 10.8 ಕಿಮೀ. ದೂರ ಸರದಿ ಸಾಲಿನಲ್ಲಿ ಸಾಗಬೇಕಾಗಬಹುದು!
ಹೌದು, ಈ ಬಾರಿ ಶಕ್ತಿ ಯೋಜನೆ ಪರಿಣಾಮವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಹತ್ತು ಲಕ್ಷ ಭಕ್ತರನ್ನು ನಿರೀಕ್ಷಿಸಿರುವ ಜಿಲ್ಲಾಡಳಿತ ಒಟ್ಟು ೧೦.೮ ಕಿಮೀ.ವರೆಗೂ ಜನರು ಸಾಲಿನಲ್ಲಿ ನಿಲ್ಲಬಹುದಾದಷ್ಟು ಕ್ಯೂ ವ್ಯವಸ್ಥೆ ಸಿದ್ಧಪಡಿಸಿದೆ. ಹಾಸನಾಂಬ ದೇವಾಲಯದ ಆವರಣದಿಂದ ಸಂತೆಪೇಟೆ ವೃತ್ತದವರೆಗೂ ಸುತ್ತಬಳಸಿನ ಸಾಲಿನ ಉದ್ದ ೧೦.೮ ಕಿಮೀ. ಆಗಿದೆ.
ಸೂರ್ಯನ ಬಿಸಿಲಿನಿಂದ ರಕ್ಷಣೆಗೆ ಜರ್ಮನ್‌ ಟೆಂಟ್‌, ಅಲ್ಲಲ್ಲಿ ದೊಡ್ಡ ಫ್ಯಾನ್‌ ಗಳನ್ನು ಅಳವಡಿಸಲಾಗಿದ್ದು, ನೆಲಕ್ಕೆ ಮ್ಯಾಟ್‌ ಹಾಕಲಾಗುತ್ತಿದೆ. ಅಲ್ಲದೆ ದಾನಿಗಳ ನೆರವಿನಿಂದ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಮಜ್ಜಿಗೆ ವಿತರಿಸಲಾಗುವುದು. ಪ್ರತಿ ಬಳಕೆ ನಂತರ ತಕ್ಷಣವೇ ಸ್ವಚ್ಛಗೊಳಿಸುವ ಸಿಬ್ಬಂದಿ ಸ್ಥಳದಲ್ಲೇ ಇರುವ ತಾತ್ಕಾಲಿಕ ಶೌಚಗೃಹಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.