ನಾನು ಮಾತಾಡಲ್ಲ ಅಂದ ಮೇಲೆ ಮಾತಾಡಲ್ಲ, ಆ ಅಧಿಕಾರವೂ ನಿಮಗಿಲ್ಲ; ಪತ್ರಕರ್ತರ ಮೇಲೆ ಹರಿಹಾಯ್ದ ಸಂಸದ ಪ್ರಜ್ವಲ್ ರೇವಣ್ಣ

ಎಂಟು, ಒಂಭತ್ತು ತಿಂಗಳ ಹಿಂದೆ ಆಗಿರೋದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ?

ಹಾಸನ: ತಮ್ಮ ಮಾಜಿ ಕಾರು ಚಾಲಕ ಕಾರ್ತಿಕ್ ಆರೋಪ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಂಸದ ಪ್ರಜ್ವಲ್‌ರೇವಣ್ಣ ಮಾಧ್ಯಮಗಳ ಮೇಲೆ ಹರಿಹಾಯ್ದರು.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವಾಗ ಕಾರ್ತಿಕ್ ಹಾಗೂ ಎ.ಟಿ.ರಾಮಸ್ವಾಮಿ ಪ್ರತಿಭಟನೆ ವಿಚಾರ ಪದೇ ಪದೆ ಪ್ರಸ್ತಾಪವಾದಾಗ ಗರಂ ಆದ ಪ್ರಜ್ವಲ್, ಅದೇ ವಿಚಾರ ನಾನು ಮಾತನಾಡಲ್ಲ, ಅದರ ಬಗ್ಗೆ ಮಾತನಾಡಿ ಎನ್ನುವ ಅಧಿಕಾರ‌ ನಿಮಗಿಲ್ಲ. ನನಗೆ ಬಲವಂತ ಮಾಡುವ ಅಧಿಕಾರ ನಿಮಗಿಲ್ಲ.
ನಾನು ಮಾತನಾಡಲ್ಲ ಅಂದರೆ ಮಾತನಾಡಲ್ಲ ಎಂದು ಹರಿಹಾಯ್ದರು.

ಇದಕ್ಕೂ ಮೊದಲು ಸಾವಧಾನದಿಂದಲೇ ಮಾತನಾಡಿದ ಪ್ರಜ್ವಲ್, ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲ್ಲ. ಕೋರ್ಟ್‌ಗೆ ಕೇಸ್ ಹಾಕೊಂಡಿದ್ದೀನಿ ಅಂತ ಅವರೇ ಹೇಳಿದ್ದಾರೆ. ಕೋರ್ಟ್‌‌ಗೆ ಹಾಕಿಕೊಂಡ ಮೇಲೆ ಮಾಧ್ಯಮದ ಮುಂದೆ ಬರುವುದು ಏನಿದೆ? ಎಲೆಕ್ಷನ್ ಹತ್ತಿರ ಬರುತ್ತಿದೆ ಎಂದು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಂಟು, ಒಂಭತ್ತು ತಿಂಗಳ ಹಿಂದೆ ಆಗಿರೋದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ? ಈ ಬಗ್ಗೆ ಚರ್ಚೆ ಮಾಡಲು ಹೋಗಲ್ಲ, ಮಾಧ್ಯಮದ ಮುಂದೆ ಕುಳಿತುಕೊಂಡು ಒಬ್ಬರ ತೇಜೋವಧೆ ಮಾಡಬಾರದು. ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಕಾಣುತ್ತೆ ಅವರ ಅಜೆಂಡಾ ಎಂಪಿ‌ ಎಲೆಕ್ಷನ್ ಆಗಿದೆ ಎಂದರು.

ಯಾರು, ಯಾರ ಮೇಲೂ ಹಲ್ಲೆ ಮಾಡಲು ಆಗಲ್ಲ. ಹಲ್ಲೆ ಮಾಡಿಸಿಕೊಂಡವರು ಎಂಟು ತಿಂಗಳವರೆಗೂ ಸುಮ್ಮನೆ ಕೂರಲ್ಲ, ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಏನೇನ್ ಮಾಡಬೇಕು ಮಾಡ್ತಾರೆ. ರಾಜಕೀಯ ಅಂದಮೇಲೆ ಇವೆಲ್ಲಾ ಇರ್ತಾವೆ. ಇನ್ನೂ ಏನೇನ್ ಮಾಡ್ತಾರೋ ಯಾರಿಗೆ ಗೊತ್ತು? ಎಂದರು.

ಎ.ಟಿ.ರಾಮಸ್ವಾಮಿ ಅವರು ದೊಡ್ಡವರಿದ್ದಾರೆ, ಅವರು ಹಿರಿಯ ರಾಜಕಾರಣಿ ಇಂತಹ ಹೋರಾಟಕ್ಕೆ ಬರ್ತಾರೆ ಅಂದರೆ ನಾನು ಏನು ಹೇಳಬೇಕು? ನಾನು ಅವರ ಬಗ್ಗೆ ಏನೂ ಚರ್ಚೆ ಮಾಡಲ್ಲ. ಅವರ ಮಾಹಿತಿ ಸರಿಯಾಗಿದ್ದರೆ ಹೋರಾಟ ಮಾಡಲಿ, ಇದರಲ್ಲಿ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ‌ ಅಂತ ಇಡೀ ರಾಜ್ಯಕ್ಕೆ, ಇಡೀ ಜಿಲ್ಲೆಗೆ ಗೊತ್ತಿದೆ ಎಂದರು.

ಇದರ ಬಗ್ಗೆ ಮುಂದುವರೆದು ಏನು ಮಾತನಾಡಲು ಹೋಗಲ್ಲ, ನಾನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲ್ಲ ಎಂದವರು ಪತ್ರಕರ್ತರು ಸ್ಪಷ್ಟ ಪ್ರತಿಕ್ರಿಯೆ ಬಯಸಿದಾಗ ಗರಂ ಆದರು.