ಮಾ. ಹನುಮಂತೇಗೌಡರಿಗೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಅಂತಿಮ ನಮನ

ಹಾಸನ: ನಿನ್ನೆ ಮೃತಪಟ್ಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾ.ಹನುಮಂತೇಗೌಡ ಅವರಿಗೆ ನಗರದ ಕಸಾಪ ಆವರಣದಲ್ಲಿ ಸೋಮವಾರ ಅಂತಿಮ ನಮನ ಸಲ್ಲಿಸಲಾಯಿತು.

ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗು ನಾಗರಿಕರು ಹನುಮಂತೆಗೌಡರ ಪಾರ್ಥಿವ ಶರೀರರಕ್ಕೆ ಗೌರವ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ನಗರದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ನಿವೇಶನ ಮಂಜೂರು ಮಾಡಿಸುವಲ್ಲಿ ಮಾ.ಹನುಮಂತೇಗೌಡ ಅವರ ಪಾತ್ರ ಮುಖ್ಯವಾಗಿದೆಯೆಂದರು.

ಮಾ.ಹನುಮಂತೇಗೌಡರು ಪರಿಷತ್ತಿನಲ್ಲಿ 1989 ರಿಂದ 1995ರ ವರೆಗೆ ಅಧ್ಯಕ್ಷರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಹೆಚ್.ಬಿ.ಜ್ವಾಲನಯ್ಯ ಅವರ ಅಧ್ಯಕ್ಷತೆಯಲ್ಲಿ ಗೌರವ ಕಾರ್ಯದರ್ಶಿಗಳಾಗಿ ಪರಿಷತ್ತಿಗೆ ನಗರದ ಹೃದಯ ಭಾಗದಲ್ಲಿ ನಿವೇಶನ ಮಂಜೂರಾತಿಯಲ್ಲಿ ಮುಂಚೂಣಿ ಯಲ್ಲಿ ನಿಂತು ಕೆಲಸ ಮಾಡಿ ಪರಿಷತ್ ಭವನ ನಿರ್ಮಾಣಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡ ಭಾಷೆ ಬೆಳವಣಿಗೆಗೆ ಸಂಘಟನೆ ಮುಖ್ಯವೆಂದು ಹನುಮಂತೇಗೌಡರು ಪ್ರತಿಪಾದಿಸುತ್ತಿದ್ದರು. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಸಕ್ರಿಯವಾಗುವಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು.‌ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಸ್ಮರಿಸಿದರು.

ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ, ಪರಿಷತ್ತಿಗೆ ಮಾ.ಹನುಮಂತೇಗೌಡರ ಸೇವೆಯನ್ನು ಸ್ಮರಿಸಿದರಲ್ಲದೆ ಅವರು ಶಿಕ್ಷಕರಾಗಿ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಸೇವೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಅನಂತರಾಮು, ಮರ್ಕುಲಿ ಗೌಡಪ್ಪ, ಬೋರೇಗೌಡ, ತಾರಾ ಜ.ಹೊ.ನಾರಾಯಣಸ್ವಾಮಿ, ಸಾಹಿತಿ ಎನ್.ಎಲ್.ಚನ್ನೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಬಿ.ಆರ್.ಬೊಮ್ಮೇಗೌಡ, ಕೋಶಾಧ್ಯಕ್ಷ ಬಿ.ಎನ್. ಜಯರಾಮು, ಕಸಾಪ ರಾಜ್ಯ ಸಮಿತಿಯ ಹೆತ್ತೂರು ನಾಗರಾಜ್, ತಾಲ್ಲೂಕು ಅಧ್ಯಕ್ಷ ಮಮತೇಶ್,
ಸಂಘಟನಾ ಕಾರ್ಯದರ್ಶಿಗಳಾದ ಆರ್.ಬಿ.ಶಂಕರ್, ಹೆಚ್.ಬಿ.ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಪತ್ರಕರ್ತ ರವಿ ನಾಕಲಗೂಡು, ಕಸಾಪ ಪದಾಧಿಕಾರಿಗಳು ಹಾಗು ಕನ್ನಡಪರ ಒಕ್ಕೂಟದ ಮುಖಂಡರು ಇತರರು ಇದ್ದರು.