ಹಾಸನ, ಏಪ್ರಿಲ್ 12: ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟಕ್ಕೆ ಜನ ತತ್ತರಿಸಿದರು. ಶನಿವಾರ ಸಂಜೆ ಮಳಲಿಯಲ್ಲಿ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಹಾಸನ ತಾಲ್ಲೂಕಿನ ಮಳಲಿ, ಶಾಂತಿಗ್ರಾಮ ಸೇರಿದಂತೆ ಹಲವು ಕಡೆ ರಾಶಿ ರಾಶಿಯಾಗಿ ಆಲಿಕಲ್ಲು ಬಿದ್ದಿದ್ದು, ಮನೆಗಳ ಮುಂದೆ-ಹಿಂದೆ ಆಲಿಕಲ್ಲಿನ ಗುಡ್ಡೆಯೇ ಸಂಗ್ರಹವಾಗಿತ್ತು. ಈ ಅಪರೂಪದ ದೃಶ್ಯಕ್ಕೆ ಸ್ಥಳೀಯರು ಒಂದೆಡೆ ಆತಂಕಗೊಂಡರೆ, ಮಕ್ಕಳು ಮತ್ತು ಮಹಿಳೆಯರು ಆಲಿಕಲ್ಲುಗಳನ್ನು ಕೈಗೆ ಬಾಚಿಕೊಂಡು ಕುತೂಹಲದಿಂದ ಗಮನಿಸಿದರು.
ಕೆಳಗಿನ ಲಿಂಕ್ ಮೂಲಕ ವಿಡಿಯೋ ವೀಕ್ಷಿಸಿ:
ಮಳೆಯಲ್ಲಿಯೇ ಮಕ್ಕಳು ಆಲಿಕಲ್ಲಿನ ಆಟಕ್ಕೆ ಮುಂದಾದರು. ಒಬ್ಬರ ಮೇಲೆ ಒಬ್ಬರು ಆಲಿಕಲ್ಲು ಎಸೆದಾಡುತ್ತಾ, ಮನೆಯ ಸುತ್ತಮುತ್ತ ಬಿದ್ದಿದ್ದ ಆಲಿಕಲ್ಲಿನ ರಾಶಿಯಲ್ಲಿ ಆಟವಾಡುತ್ತಾ ನಲಿದರು. ಈ ದೃಶ್ಯ ಒಂದೆಡೆ ಕುತೂಹಲ ಮೂಡಿಸಿದರೆ, ಮತ್ತೊಂದೆಡೆ ಆಲಿಕಲ್ಲಿನಿಂದ ಆಗಬಹುದಾದ ಅನಾಹುತದ ಬಗ್ಗೆ ಸ್ಥಳೀಯರಲ್ಲಿ ಆತಂಕವೂ ವ್ಯಕ್ತವಾಯಿತು.