ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ ಅರ್ಧ ಶತಕೋಟಿಯತ್ತ ದಾಪುಗಾಲಿಟ್ಟಿದೆ.
ಅವರು ಚುನಾವಣಾ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ₹40.94 ಕೋಟಿ ಮೌಲ್ಯದ ಚರ-ಸ್ಥಿರ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
5,44 ಕೋಟಿ ರೂ. ಮೌಲ್ಯದ ಚರ, 35.40 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಸೇರಿ 40.94 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಸದ್ಯ 9.29 ಲಕ್ಷ ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ರೂ. ಇದೆ. ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂ. ಆದಾಯ ಗಳಿಸಿರುವ ಪ್ರಜ್ವಲ್, ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಸಿದ್ದಾರೆ.
31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಹೊಂದಿದ್ದು, ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡಗಳಿವೆ. ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವ ಎಚ್.ಡಿ.ರೇವಣ್ಣ ಪುತ್ರ ತಮ್ಮ ಅತ್ತೆ ಅನುಸೂಯರಿಂದ 22 ಲಕ್ಷ ರೂ., ಅತ್ತೆ ಶೈಲಜಾರಿಂದ 10 ಲಕ್ಷ ರೂ., ಅಜ್ಜಿ ಚನ್ನಮ್ಮರಿಂದ 23 ಲಕ್ಷ ರೂ., ಕುಪೇಂದ್ರ ರೆಡ್ಡಿಯಿಂದ ಒಂದು ಲಕ್ಷ ರೂ., ತಂದೆ ರೇವಣ್ಣರಿಂದ 86 ಲಕ್ಷ, ಸಹೋದರ ಡಾ.ಸೂರಜ್‌ರೇವಣ್ಣ ಅವರಿರಿಂದ 1 ಕೋಟಿ ರೂ. ಸಾಲ ಪಡೆದಿದ್ದು ಅವರ ಸಾಲದ ಒಟ್ಟು ಮೊತ್ತ 4.48 ಕೋಟಿ ರೂ.
ಸರ್ಕಾರಕ್ಕೆ 3.04 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆ ಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಹೊಂದಿರುವ ಪ್ರಜ್ವಲ್:
67 ಲಕ್ಷ ರೂ. ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನಾಭರಣ, 17.48 ಲಕ್ಷ ರೂ. ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ಮೌಲ್ಯದ ವಜ್ರದ ಆಭರಣಗಳನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ.