ಹಾಸನ: ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಯಾವ್ಯಾವ ಶಾಸಕರು ಏನೇನು ಮಾಡಿದ್ದಾರೆ ಎನ್ನುವುದನ್ನು ಪೂರ್ಣ ಪ್ರಮಾಣದಲ್ಲಿ ಇನ್ನೆರಡು ದಿನಗಳಲ್ಲಿ ಹೇಳುತ್ತೇವೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಮುಡಾ ಹಗರಣದಲ್ಲಿ ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಯಾರ‌್ಯಾರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆಗಿದೆ. ಯಾರ‌್ಯಾರದ್ದು ಬೇನಾಮಿ ಆಸ್ತಿ ಇದೆ ತನಿಖೆ ಆಗುತ್ತಿದೆ ಎಂದರು.
ಕುಮಾರಣ್ಣ, ಕುಮಾರಣ್ಣನ ಸ್ನೇಹಿತರು ಎಷ್ಟು ಬೇನಾಮಿ ಆಸ್ತಿ ಮಾಡವ್ರೆ ಅಂತ ಹೇಳ್ತಿವಿ. ನನ್ನ ಕಾರಿನಲ್ಲಿ ದಾಖಲೆಗಳಿವೆ, ಸುಮ್ಮನೆ ವೈಯಕ್ತಿಕ ದ್ವೇಷ ಮಾಡಬಾರದು ಅಂತ ಸುಮ್ಮನಿದ್ದೇವೆ.
ಯಡಿಯೂರಪ್ಪ, ವಿಜಯೇಂದ್ರ ಅವರ ಕುಟುಂಬದ್ದು ಎಷ್ಟು ಬೇನಾಮಿ ಆಸ್ತಿಗಳಿವೆ ಯಾರ‌್ಯಾರು ನಿವೇಶನಗಳನ್ನು ಪಡೆದಿದ್ದಾರೆ? ಕುಮಾರಣ್ಣ, ಕುಮಾರಣ್ಣನ ಸ್ನೇಹಿತರು ಎಷ್ಟು ಜನ ಮಾಡಿದ್ದಾರೆ. ಎಲ್ಲಾ ಮಾಹಿತಿಯನ್ನು ಕಲೆಕ್ಟ್ ಮಾಡುತ್ತಿದ್ದೇವೆ. ಇನ್ನೂ ಎರಡ್ಮೂರು ದಿನದಲ್ಲಿ ಜನರ ಮುಂದೆ ತಂದು ಇಡುತ್ತೇವೆ. ಅದೇನ್ ಆಗುತ್ತೆ ನಾನು ಎದುರಿಸಲು ಸಿದ್ದನಾಗಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಎರಡು ಅಧಿಕಾರ ಹೊಂದಿರುವುದರಿಂದ ಅವರನ್ನು ಬದಲಾವಣೆ ಮಾಡಬೇಕು. ನಾನೇ ಬಿಟ್ಟು ಕೊಡುತ್ತೇನೆ ಬೇರೆ ಯಾರನ್ನಾದರೂ ಮಾಡಿ ಎಂದು ಡಿ.ಕೆ.ಶಿವಕುಮಾರ್ ಅವರೇ ನೇರವಾಗಿ ಹೈಕಮಾಂಡ್‌ಗೆ ಹೇಳಿದ್ದಾರೆ.
ಆ ಸ್ಥಾನಕ್ಕೆ ಯಾರನ್ನು ತರಬೇಕು? ಯಾರು ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅವರೇ ಸ್ವತಃ ಬಿಟ್ಟುಕೊಡಲು ಸಿದ್ದರಿದ್ದಾರೆ. ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ, ಎರಡು ಜವಾಬ್ದಾರಿ ಖಾತೆಗಳನ್ನು ಇಟ್ಟುಕೊಂಡು ನಿರ್ವಹಿಸುವುದು ಕಷ್ಟವಾಗಿದೆ. ನೀವೇ ಯಾರನ್ನಾದರೂ ಮಾಡಿ ಅಂತ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಹೈಕಮಾಂಡ್ ನೇಮಕ ಮಾಡುತ್ತಾರೆ ಎಂದರು.