ಪೆನ್ ಡ್ರೈವ್ ಕೇಸ್ ನಲ್ಲಿ ಎಸ್ಐಟಿ ಕಸ್ಟಡಿ ಅಂತ್ಯ; ಭಾರಿ ಭದ್ರತೆಯಲ್ಲಿ ಜೈಲಿಗೆ ಹಿಂದಿರುಗಿದ ಜಿ.ದೇವರಾಜೇಗೌಡ

ಮರಳಿ ಕಸ್ಟಡಿಗೆ ಕೇಳದ ಎಸ್ಐಟಿ| ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ಮುಂದುವರಿಕೆ|

ಹಾಸನ: ಪೆನ್‌ಡ್ರೈವ್ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಗೆ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಎಸ್ಐಟಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು.

ಭಾರಿ ಭದ್ರತೆಯಲ್ಲಿ ದೇವರಾಜೇಗೌಡರನ್ನು ಕೋರ್ಟ್‌‌‌ಗೆ ಕರೆತಂದಿದ್ದ ಎಸ್‌ಐಟಿ ತಂಡ ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯದ ಎದುರು ಹಾಜರುಪಡಿಸಿತು. ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಲಿಲ್ಲ.

ಹೀಗಾಗಿ ಅತ್ಯಾಚಾರ ಪ್ರಕರಣದಲ್ಲಿ ಮೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಬಿಡಲಾಯಿತು.

ಎಸ್ಐಟಿ ವಶಕ್ಕೆ ಪಡೆಯುವಾಗ ಸುದ್ದಿಗಾರರೊಂದಿಗೆ ಸ್ಪೋಟಕ ವಿಷಯಗಳನ್ನು ಮಾತನಾಡಿ ಸಂಚಲನ ಸೃಷ್ಟಿಸಿದ್ದ ದೇವರಾಜೇಗೌಡ ಅವರ ಭದ್ರತೆಗೆ ಪೊಲೀಸರು ಹೆಚ್ಚು ಜಾಗ್ರತೆ ವಹಿಸಿದ್ದರು. ಅವರು ನ್ಯಾಯಾಲಯದೊಳಗೆ ಹೋಗುವಾಗ, ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಹಾಗೂ ಜೈಲಿಗೆ ಹೋಗುವಾಗ ಮಾಧ್ಯಮದವರ ಸಂಪರ್ಕಕ್ಕೆ ಬಾರದಂತೆ ಪೊಲೀಸ್ ತಂಡ ಸುತ್ತುವರಿದಿತ್ತು.