ಮುದಗಲ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ: ನೂರಾರು ಜನರು ಭಾಗಿ

ಮುದಗಲ್: ಸಾರ್ವಜನಿಕರ ಆರೋಗ್ಯ ಕಲ್ಯಾಣಕ್ಕಾಗಿ ಮುದಗಲ್ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಶನಿವಾರ ನಡೆಯಿತು. ಲಕ್ಷ್ಮಿ ಬಾಯಿ ಲೇಔಟ್‍ನ ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪದ ಐಪಿಸಿ ಸುವಾರ್ತಾ ಪ್ರಾರ್ಥನಾ ಮಂದಿರ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಲಿಂಗಸುಗೂರು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಸಹಕಾರದೊಂದಿಗೆ, ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.

ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಉದ್ಘಾಟಿಸಿ, ಮಾತನಾಡಿದರು. “ಬಡವರ ಆರೋಗ್ಯದತ್ತ ಕಾಳಜಿಯೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ. ಉಚಿತ ತಪಾಸಣೆ ಹಾಗೂ ಔಷಧಿ ವಿತರಣೆ ಮೂಲಕ ಅವರ ಆರೋಗ್ಯ ಕಾಪಾಡಲು ಶ್ರಮಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಅವರು ತಿಳಿಸಿದರು.

ಶಿಬಿರದಲ್ಲಿ ವಿವಿಧ ತಪಾಸಣೆಗಳು
ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಡೆದ ಶಿಬಿರದಲ್ಲಿ ನೂರಾರು ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಿಪಿ, ರಕ್ತಪರೀಕ್ಷೆ, ಇಸಿಜಿ ಸೇರಿದಂತೆ ವಿವಿಧ ವೈದ್ಯಕೀಯ ತಪಾಸಣೆಗಳು ನಡೆದವು. ಆರೋಗ್ಯ ತಪಾಸಣೆ ಬಳಿಕ ರೋಗಿಗಳಿಗೆ ಉಚಿತ ಔಷಧಿಗಳು ವಿತರಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅಗತ್ಯವಿರುವವರಿಗೆ, ಬೆಂಗಳೂರು ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಹೋಗುವಂತೆ ಸಲಹೆ ನೀಡಲಾಯಿತು.

ವೈದ್ಯಕೀಯ ತಜ್ಞರ ತಂಡದ ಸೇವೆ
ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಲಾಗಿದ್ದು, ಹಲವಾರು ವಿಶೇಷಜ್ಞರು ಸೇವೆ ಸಲ್ಲಿಸಿದರು. ಕಾರ್ಡಿಯಾಲಜಿಸ್ಟ್ ಡಾ. ಮಲ್ಲಿಕಾರ್ಜುನ, ಕಿಡ್ನಿ ತಜ್ಞ ಡಾ. ಮುರಳಿ, ಆರ್ಥೋ ಹಾಗೂ ನಿರೋ ತಜ್ಞ ಡಾ. ಸೈನಿಶ್, ಫಿಜಿಷಿಯನ್ ಡಾ. ಅಭಿಲಾಶ್, ಇಕೋ ಟೆಕ್ನಿಕ್ ವಿವೇಕ್, ಲ್ಯಾಬ್ ಟೆಕ್ನಿಷಿಯನ್ ಯೋಹಾನ್ ಮುಂತಾದವರು ತಪಾಸಣೆ ನಡೆಸಿದರು.

ಸಮುದಾಯದ ಸಹಭಾಗಿತ್ವ
ಈ ಕಾರ್ಯಕ್ರಮದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ, ಪುರಸಭೆ ಉಪಾಧ್ಯಕ್ಷ ಅಜ್ಮೀರಸಾಬ್ ಬೆಳ್ಳಿಕಟ್, ಕೆಪಿಸಿಸಿ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ್, ವ್ಯವಸ್ಥಾಪಕ ಗಜೇಂದ್ರ, ಸೂಫಿಯರಾಣಿ, ಸಂತೋಷ್ ಕಟ್ಟಿಮನಿ, ಶ್ರೀದೇವಿ ಬಿ, ರಾಘು ಕುದರಿ, ಯೇಸುರಾಜ್, ಮಹಾಂತೇಶ, ಯಮನೂರ, ಹನುಮಂತ ಹಾಗೂ ಇತರರು ಭಾಗವಹಿಸಿ, ಶಿಬಿರ ಯಶಸ್ವಿಯಾಗಿ ನಡೆಸುವಲ್ಲಿ ಸಹಕಾರ ನೀಡಿದರು.