ಬಣಕಲ್ ಬಳಿ ಭೀಕರ ಅ*ಪಘಾತ: ಧರ್ಮಸ್ಥಳದಿಂದ‌ ಹಿಂದಿರುಗುತ್ತಿದ್ದ ಒಂದೇ ಕುಟುಂಬದ ನಾಲ್ವರ ಸಾ*ವು, 12 ಜನರಿಗೆ ಗಾಯ

ಅಪಘಾತದ ರಭಸಕ್ಕೆ ತಗಡಿನ‌ ಮುದ್ದೆಯಾದ ಓಮ್ನಿ

ಚಿಕ್ಕಮಗಳೂರು: ಎರಡು ಕಾರು ಹಾಗೂ ಮೆಸ್ಕಾಂನ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ಓಮ್ನಿಯಲ್ಲಿದ್ದ‌ ನಾಲ್ವರು ಮೃತಪಟ್ಟು 12 ಜನರು ಗಾಯಗೊಂಡ ಘಟನೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234ರ ಬಣಕಲ್-ಕೊಟ್ಟಿಗೆಹಾರ ನಡುವೆ ಸಂಭವಿಸಿದೆ.

ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣದವರಾದ ಪ್ರೇಮಾ(58), ಹಂಪಯ್ಯ(65), ಮಂಜಯ್ಯ(60) ಪ್ರಭಾಕರ್(45) ಮೃತರು. ಓಮ್ನಿ ಹಾಗೂ ಆಲ್ಟೋ ಕಾರುಗಳಲ್ಲಿದ್ದ 12 ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?
ಹಂಪಯ್ಯ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಒಂದು ಓಮ್ನಿ ಹಾಗೂ ಆಲ್ಟೋ ಕಾರುಗಳಲ್ಲಿ ಚಿತ್ರದುರ್ಗಕ್ಕೆ ಮರಳುತ್ತಿದ್ದರು ಬಣಕಲ್ ಸಮೀಪ ತೆರಳುವಾಗ ಮೂಡಿಗೆರೆ ಕಡೆಯಿಂದ ಬಂದ ಮೆಸ್ಕಾಂನ ಲಾರಿ ಡಿಕ್ಕಿ ಹೊಡೆದಿದೆ. ಓಮ್ನಿ ಹಿಂಬಾಲಿಸುತ್ತಿದ್ದ ಆಲ್ಟೋ ಕೂಡ ಓಮ್ನಿಗೆ ಹಿಂದಿನಿಂದ ಗುದ್ದಿದೆ.

ಇದರಿಂದ ಓಮ್ನಿ ತಗಡಿನ ಮುದ್ದೆಯಂತಾಗಿದ್ದು ಮೂವರು ಸ್ಥಳದಲ್ಲೆ ಮೃತಪಟ್ಟರು. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.