ರೌಡಿ ಚೈಲ್ಡ್ ರವಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್

ಬೆದರಿಕೆ ಕರೆ ಮಾಡುತ್ತಿದ್ದ ಹಳೇ ಗೆಳೆಯನಿಗೆ ಸ್ಕೆಚ್ ಹಾಕಿದ ಪ್ರೀತಂ ಗ್ಯಾಂಗ್| ಬಂಧಿತ ಪ್ರೀತಂ ಮೇಲೆ 13 ಪ್ರಕರಣ

ಹಾಸನ: ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು

ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಮುಖ ಆರೋಪಿ ರಂಗೋಲಿ ಹಳ್ಳದ ಪ್ರೀತಂ ಅಲಿಯಾಸ್ ಗುಂಡಿಪ್ರೀತು (೨೭), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ(೨೬), ರಂಗನಾಥ್ ಅಲಿಯಾಸ್ ರಂಗ ಚೇತು(೨೬) ಮತ್ತು ಅಮಿತ್ ಅಲಿಯಾಸ್ ಅಮ್ಮಿ (೩೧) ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಚೈಲ್ಡ್ ರವಿ ಮತ್ತು ಪ್ರೀತಂ ಇಬ್ಬರೂ ಒಂದು ಕಾಲದ ಸ್ನೇಹಿತರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಈ ನಡುವೆ ಚೈಲ್ಡ್ ರವಿ ಆಗಾಗ ಪ್ರೀತಂಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಇದೇ ಕಾರಣಕ್ಕೆ ರವಿ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ ಎಂದರು.

ಇದಲ್ಲದೇ ಇನ್ನಾವ ಕಾರಣಕ್ಕೆ ಮರ್ಡರ್ ಮಾಡಲಾಗಿದೆ ಎಂಬುದರ ಬಗ್ಗೆ ಹಾಗೂ ಆಡಿಯೋ ಸಂಭಾಷಣೆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ರವಿ ಅವರ ಪತ್ನಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲು ಎಎಸ್ಪಿ ವೆಂಕಟೇಶ್‌ನಾಯ್ಡು ಮತ್ತು ಡಿವೈಎಸ್ಪಿ ಮುರಳಿಧರ್ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ನಮ್ಮ ತಂಡ ಕಳೆದ ರಾತ್ರಿ ೮ ಗಂಟೆ ವೇಳೆ ಹಾಸನ ತಾಲೂಕಿನ ಗ್ಯಾರಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಕೃತ್ಯ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ನಮ್ಮ ಅಧಿಕಾರಿಗಳು ಹಾಗೂ ತಂಡದ ಕಾರ್ಯವೈಖರಿ ಪ್ರಶಂಸನಾರ್ಹ ಎಂದು ಅಭಿನಂದಿಸಿದರು. ಈ ವೇಳೆ ವೆಂಕಟೇಶ್ ನಾಯ್ಡು, ಪಿ.ಕೆ.ಮುರಳಿಧರ್ ಇದ್ದರು.

ಚೈಲ್ಡ್ ರವಿ ವಿರುದ್ಧ ೨೦೨೦ ರಲ್ಲಿ ದಾಖಲಾಗಿದ್ದ 394, 504 ಪ್ರಕರಣವೇ ಕೊನೆ, ಆದರೆ ಪ್ರೀತಂ ವಿರುದ್ಧ 13 ಕೇಸ್ ಇವೆ. ಇವುಗಳಲ್ಲಿ 10 ಖುಲಾಸೆ ಯಾಗಿದ್ದು, 3 ವಿಚಾರಣೆ ಹಂತದಲ್ಲಿವೆ. ಅನೇಕ ಸಲ ಜೈಲು ಸೇರಿದ್ದ ಈತ, ಹೊರ ಬಂದ ನಂತರ ಅದೇ ಚಾಳಿ ಮುಂದುವರಿಸಿದ್ದ ಎಂದು ಎಸ್ಪಿ ಹೇಳಿದರು.