ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370ರಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಆದೇಶವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ವಾಗತಿಸಿದರು.
ಹೊಳೆನರಸೀಪುರ ತಾಲೂಕಿನ ತಮ್ಮ ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆಯ ಸೋಮವಾರ ಅಂಗವಾಗಿ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ, ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ ಏನು ಅನ್ಯಾಯ ಅಥವಾ ಅನಕೂಲವಾಗುತ್ತೋ ಅದು ಜಮ್ಮು, ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು.
ಐವರು ನ್ಯಾಯಾಧೀಶರು ಸುಪ್ರೀಂಕೋರ್ಟ್ನಲ್ಲಿ ತೀರ್ಪು ಕೊಟ್ಟಿದ್ದಾರೆ ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ ಒಂದು ಕಡೆ, ಇನ್ನೊಂದು ಕಡೆ ಎನ್‌ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾಗೆ ತೀರ್ಪು ಕೊಡುತ್ತಾರೋ, ಎನ್‌ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡ್ತಾರೋ ಕಾಯ್ದು ನೋಡಬೇಕು ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಜನರ ಮನಸ್ಸಿನಲ್ಲಿ ಬಿಜೆಪಿಗೆ ಸ್ವಾಭಾವಿಕವಾಗಿ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ ಎಂದರು.
ವಂಶ ಪಾರಂಪರ್ಯವಾಗಿ ನಾವು ಈಶ್ವರನ ಆರಾಧಕರು. ನಮಗೆ ನಮ್ಮ ಪೂರ್ವಿಕರು ಹೇಳಿರುವ ಹಲವು ಘಟನೆಗಳನ್ನು ಸ್ಮರಿಸಿಕೊಳ್ಳುತ್ತೇನೆ. ರೇವಣ್ಣ ಅವರು ಮುತುವರ್ಜಿವಹಿಸಿ ಗಣೇಶ, ಸುಬ್ರ‍್ರಮಣ್ಯ ಮಾರುತಿ, ಭೈರವ, ನವಗ್ರಹ ದೇವರುಗಳ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ.
ನಮ್ಮ ತಂದೆ ಈ ಊರಿನಲ್ಲಿದ್ದ ಎರಡು ದೇವಸ್ಥಾನದಲ್ಲಿ ಶನಿವಾರ, ಸೋಮವಾರ ಪೂಜೆ ಮಾಡುತ್ತಿದ್ದರು.
ನಮ್ಮ ಊರಿನ ಮಹಾಜನತೆ ಈ ಒಂದು ವಿಷಯದಲ್ಲಿ ಒಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದ ಅವರು, ಕೊಡಗಿಗೆ 120 ಮನೆ ಕಟ್ಟಿಸಿಕೊಟ್ಟಿದ್ದಾರೆ. ಆದರೆ ಈವರೆಗೂ ವಿರತಣೆ ಮಾಡಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೂ ಒಂದೇ ರೀತಿ ಮನೆ ಕಟ್ಟಿಸಿದ್ದಾರೆ. ನನಗೆ ಸ್ವಲ್ಪ ಹುಷಾರಿಲ್ಲ. ಮೃತ್ಯು ಸಂಜೀವಿನಿ ಹೋಮ ಮಾಡಿದ್ದೇವೆ, ವಿಶೇಷವಾಗಿ ದೇವಸ್ಥಾನದಲ್ಲೇ ಮಾಡಬೇಕು, ನಮ್ಮ ಶ್ರೀಮತಿ ಬೇಡ ಎಂದರೂ ನಾನು ಬಂದ್ದಿದೇನೆ ಎಂದರು.
ದೇವೇಗೌಡರಿಗೆ ಪುತ್ರ ಎಚ್.ಡಿ.ರೇವಣ್ಣ ಸಾಥ್ ನೀಡಿದರು. ಕುಟುಂಬ ಸಮೇತವಾಗಿ ಪೂಜೆಯಲ್ಲಿ ದೇವೇಗೌಡರು ಭಾಗಿಯಾದರು. ಹರದನಹಳ್ಳಿಯಲ್ಲಿರುವ ದೇವೇಶ್ವರ ದೇಗುಲದಲ್ಲಿ ಮಧ್ಯಾಹ್ನ 12 ಗಂಟೆ ನಂತರ ಪೂಜೆ ಆರಂಭವಾಯಿತು.