ಹಾಸನ: ಪ್ರಜ್ವಲ್ ರೇವಣ್ಣರನ್ನು ಸೋಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿರುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್ ಎಸ್ಸಿ/ಎಸ್ಟಿ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಾನು ಬದುಕಿದ್ದೇನೆ, ಈ ಸಾರಿ ಅರಸೀಕೆರೆಯಲ್ಲಿ ಸಂತೋಷ್ ಎಂಎಲ್‌ಎ ಆಗೋದನ್ನು ಕಣ್ಣಿಂದ ನೋಡ್ತೇನೆ, ಅಲ್ಲಿ ಪ್ರಚಾರಕ್ಕೆ ನಾನೇ ಬರ್ತೇನೆ . ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸಿಕೊಂಡು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ನ ದೌರ್ಜನ್ಯ ತುಳಿಯಬೇಕು ಅಂತ ಅರಸೀಕೆರೆ ಶಾಸಕರು ಭಾಷಣ ಮಾಡಿದ್ದಾರೆ ಎಂದು ಕಿಡಿಕಾರಿದರು.
ನನ್ನ ತಾಲ್ಲೂಕಿನವನನ್ನು (ಎಚ್.ಕೆ.ಜವರೇಗೌಡ) ರಾಜ್ಯಸಭೆ ಮೆಂಬರ್ ಮಾಡ್ದೆ, ಅವರೂ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ದೌರ್ಜನ್ಯವನ್ನು ಮಟ್ಟಹಾಕು ಎಂದು ಅರಸೀಕೆರೆಯ ಮಹಾನ್ ನಾಯಕರು ಮಾತನಾಡಿದ್ದಾರೆ.
ನೆನಪಿನಲ್ಲಿಟ್ಟುಕೊಳ್ಳಿ ಈ ಸಾರಿ ಎನ್.ಆರ್.ಸಂತೋಷ್ ಗೆಲ್ಲಬೇಕು. ಅರಸೀಕೆರೆ ಶಾಸಕರನ್ನು ರೇವಣ್ಣ ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡಿದ್ದರು. ಈಗ ಅವರ ತಲೆಗೆ ನಂಜು ಬಂದಿದೆ, ಕಾಲ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಜ್ವಲ್ ಯಾವ್ಯಾವ ದೌರ್ಜನ್ಯ ಮಾಡಿದ್ದಾರೆ ಹೇಳ್ತಾರಾ? ಕಾಲ ಸಮೀಪವಾಗುತ್ತಿದೆ ಮಾತಿನ ಮೇಲೆ ಎಚ್ಚರಿಕೆ ಇರಲಿ. ರೇವಣ್ಣ ಅರಸೀಕೆರೆ ಏನೇನು ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಅರಿವಿದೆ.
ಅರಸೀಕೆರೆಗೆ ಕುಡಿಯುವ ನೀರು ತಂದುಕೊಟ್ಟವರು ಯಾರು? ಸಿದ್ದರಾಮಯ್ಯ ಅವರನ್ನು ಮಂತ್ರಿ ಮಾಡ್ತಿನಿ ಅಂತ ಹೇಳಿದ್ದಾರೆ. ಅಲ್ಲಿಯವರೆಗೂ ಅವರಿಗೆ ಗೃಹಮಂಡಳಿಯೇ ಬೇಕು. ಅವರು ನಿಮಗೆಲ್ಲ ಮನೆಕಟ್ಟಿಸಿ ಕೊಡ್ತಾರೆ ಎಂದು ವ್ಯಂಗ್ಯವಾಡಿದರು.
ಎತ್ತಿನಹೊಳೆ ಯೋಜನೆ ನೀರು ಅರಸೀಕೆರೆಗೆ ಹೋಗಿದ್ಯಾ? ಅಥವಾ ಕೋಲಾರ, ಚಿಕ್ಕಬಳ್ಳಾಪುರ ಹೋಗಿದೆಯಾ?
ಯೋಜನೆಯ ವೆಚ್ಚ ಎಂಟು ಸಾವಿರ ಕೊಟಿಯಿಂದ ಶುರುವಾಗಿ, ಇಪ್ಪತ್ತೈದು ಸಾವಿರಕ್ಕೆ ಹೋಗಿದೆ.
ಕಾರಿನಲ್ಲಿ ಓಡಾಡುವ ಧೀಮಾಕು, ಆ ಧಿಮಾಕು, ಗರ್ವದಿಂದ ಪ್ರಜ್ವಲ್‌ನನ್ನು ಓಡಿಸಲೇಬೇಕು ಅಂತಿದ್ದಾರೆ. ನಾನು ಈ ಬಾರಿ ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲಾ ಉಳಿದ 24 ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ಹೋಗುತ್ತೇನೆ.
ಶೋಭಾ ಕರಂದ್ಲಾಜೆ, ತುಮಕೂರಿನಲ್ಲಿ ಸೋಮಣ್ಣ, ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ, ಯಡಿಯೂರಪ್ಪ ಮಗ ರಾಘವೇಂದ್ರ ಎಲ್ಲೆಲ್ಲಿ ನನ್ನನ್ನು ಹೋಗಬೇಕು ಅಂತಾರೋ…28 ಕ್ಷೇತ್ರಗಳಲ್ಲೂ ಹೋರಾಟ ಮಾಡ್ತೇನೆ ಎಂದರು.
ನರೇಂದಮೋದಿಯವರು ಪ್ರಧಾನಮಂತ್ರಿ ಆಗಬೇಕು. ಭಾರತದ ಆರ್ಥಿಕ ಶಕ್ತಿ ಐದರಿಂದ ಮೂರನೇ ಸ್ಥಾನಕ್ಕೆ ಬಂದಿದೆ. ಮೋದಿ ಬಿಟ್ಟರೆ ಬೇರೆ ನಾಯಕರು ಯಾರು ಇದ್ದಾರೆ? ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳಿದ್ರೆ ಸಿದ್ದರಾಮಯ್ಯ ವಿರೋಧ ಮಾಡ್ತಾರೆ, ಮಮತಾ ಬ್ಯಾನರ್ಜಿಯವರನ್ನು ವಿರೋಧ ಮಾಡ್ತಾರೆ ಎಂದು ಕುಟುಕಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ-ಜೆಡಿಎಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರಾದರೂ ಆಗಲಿ, ಅದು ಆಮೇಲೆ. ಅವರಿಂದ ನಿಮ್ಮ ಕೆಲಸ ಮಾಡಿಸುತ್ತೇನೆ ಅದು ನನ್ನ ಕಮಿಟ್‌ಮೆಂಟ್ ಎಂದರು.