ಟೈಂ ಬಂದಾಗ ಮಾತಾಡುವೆ; ಕರ್ನಾಟಕದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸದ ಮಾಜಿ ಪ್ರಧಾನಿ

ದೇವೇಗೌಡರ ಕುಟುಂಬದಿಂದ ಮಾವಿನಕೆರೆ ಬೆಟ್ಟದಲ್ಲಿ ಕಡೆ ಶ್ರಾವಣ ಶನಿವಾರದ ಪೂಜೆ

ಹಾಸನ: ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದರು.

ಇಂದು ಕಡೆಯ ಶ್ರಾವಣ ಶನಿವಾರ ಹಿನ್ನೆಲೆ ಹೊಳೆನರಸೀಪುರ ತಾಲೂಕು ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ನಾನು ಕರ್ನಾಟಕದ ಯಾವುದೇ ವಿಷಯದ ಬಗ್ಗೆ ಮಾತನಾಡಲ್ಲ. ಈಗ ಮಾತನಾಡುವುದಿಲ್ಲ, ಟೈಂ ಬರುತ್ತೆ ಆಗ ಮಾತಾಡುವೆ ಎಂದರು.

ಕಾಂಗ್ರೆಸ್‌ ನಿಂದ ರಾಜಭವನ ಚಲೋ ಬಗ್ಗೆಯೂ ಈಗ ನಾನು ಮಾತನಾಡಲ್ಲ. ಮುಂದೆ ಮಾತನಾಡುವ ಕಾಲ ಬರುತ್ತೆ, ಆಗ ಮಾತನಾಡುವೆ ಎಂದು ಗೌಡರು ಹೇಳಿದರು.

ಮುಂದೆ ಹಾಸನಕ್ಕೆ ಬರ್ತೀನಿ, ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ, ಮಂಡಿ ನೋವು ಬಿಟ್ಟರೆ ಆರೋಗ್ಯ ಸರಿಯಿದೆ, ತೊಂದರೆಯಿಲ್ಲ ಎಂದರು. ಇದೇ ವೇಳೆ ತಮ್ಮ ಕಾಶ್ಮೀರ ಪ್ರವಾಸದ ಬಗ್ಗೆ ಮಾತನಾಡಿದ ಗೌಡರು, ಅಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇದೆ, ಹತ್ತುವುದು ಕಷ್ಟ. ನಾನು 3೦ ಮೆಟ್ಟಿಲು ಹತ್ತಿದೆ, ಆಮೇಲೆ ಆಗಲಿಲ್ಲ. ಆಗ ಸಿಆರ್‌ಪಿಎಫ್ ಯೋಧರು ದೇವಾಲಯಕ್ಕೆ ಕರೆದುಕೊಂಡು ಹೋದರು. ನಂತರ ದೇವರಿಗೆ ಪೂಜೆ ಸಲ್ಲಿಸಿದೆ.ನಾಥದ್ವಾರದಲ್ಲಿ ಕೃಷ್ಣನ ದೇವಾಲಯ ಇದೆ. ಬಹಳ ಪ್ರಸಿದ್ಧವಾದ ದೇವಾಲಯ ಅದು, ಅಲ್ಲಿಗೂ ಹೋಗಿದ್ದೆ ಎಂದರು.

ಮೋದಿಗೆ ಮತ ವಿಶ್ವಾಸ:
ಪ್ರಧಾನಿ ಮೋದಿ ಅವರು  ಆರ್ಟಿಕಲ್ 370 ರದ್ದು ಮಾಡಿದ್ದಾರೆ. ಮೋದಿ ಅವರು ಬಂದ ಮೇಲೆ ಉಗ್ರರನ್ನು ಕಂಟ್ರೋಲ್ ಮಾಡಿದ್ದಾರೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಮೋದಿ ಮತ್ತು ಶಾ ಕಠಿಣವಾದ ಕ್ರಮ ತೆಗೆದುಕೊಂಡಿದ್ದಾರೆ.

ಹಿಂದೆ ನಡೆಯುತ್ತಿದ್ದ ಅಕ್ರಮವನ್ನು ಸ್ವಲ್ವ ಮಟ್ಟಿಗೆ ಸುಧಾರಣೆ ಮಾಡಿದ್ದಾರೆ. ಜನ ಬೀದಿಯಲ್ಲಿ ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಈಗ ಅಲ್ಲಿ ಚುನಾವಣೆ ನಡೆಯುತ್ತಿದೆ. ಓಟು ಯಾರಿಗೆ ಹಾಕ್ತಾರೋ, ಬಿಡ್ತಾರೋ ಕೇಳಬಾರದು. ಮೋದಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ನೆಮ್ಮದಿಯಿಂದ ಅಲ್ಲಿನ ಜನರು ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಂಗನಾಥನ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡ್ತೀನಿ. ಹಾಸನ ನನ್ನ ಜಿಲ್ಲೆ, ನನ್ನ ಹುಟ್ಟೂರು, ಸ್ವಂತ ಕ್ಷೇತ್ರ ಇದನ್ನು ಹೇಗೆ ಮರೆಯಲಿ ಎಂದ ಗೌಡರು, ಸದ್ಯಕ್ಕೆ ನಾನು ಜಿಲ್ಲಾ ಪ್ರವಾಸ ಮಾಡಲ್ಲ. ಕೆಲ ದಿನಗಳ ನಂತರ ನಿಮಗೆ ತಿಳಿಸಿ ಪ್ರವಾಸ ಮಾಡ್ತೇನೆ ಎಂದರು.

ಇದಕ್ಕೂ ಮುನ್ನ 4 ತಿಂಗಳ ಬಳಿಕ ತವರು ಜಿಲ್ಲೆಗೆ ಆಗಮಿಸಿದ ಗೌಡರು, ಕಡೆ ಶ್ರಾವಣ ಶನಿವಾರ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊಳೆನರಸೀಪುರದ ಹೇಮಾವತಿ ಕ್ರೀಡಾಂಗಣ ಹೆಲಿಪ್ಯಾಡ್‌ಗೆ ಆಗಮಿಸಿದ ಗೌಡರು ಬಳಿಕ ರಸ್ತೆ ಮಾರ್ಗವಾಗಿ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದರು.

ದೇವೇಗೌಡರಿಗೆ ಪೂರ್ಣ ಕುಂಭ ಸ್ವಾಗತ ಕೋರಿದ ಅರ್ಚಕರು
ದೊಡ್ಡಗೌಡರಿಗೆ ಪುತ್ರ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಮೊಮ್ಮಗ ಹಾಗೂ ಎಂಎಲ್‌ಸಿ ಡಾ.ಸೂರಜ್ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ದೇವೇಗೌಡರನ್ನು ಮಂಗಳ ವಾದ್ಯ ಹಾಗೂ ಪೂರ್ಣ ಕುಂಭದೊಂದಿಗೆ ದೇವಾಲಯಕ್ಕೆ ಆಡಳಿತ ಮಂಡಳಿಯವರು ಸ್ವಾಗತ ಕೋರಿದರು.