ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲ್ಲ, ಸಾಲಮನ್ನಾ ಆಗಲ್ಲ; ಮೋದಿ ಎತ್ತರಕ್ಕೆ ಬೆಳೆಯುವ ಮತ್ತೊಬ್ಬರು ದೇಶದಲ್ಲೇ ಇಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಕಡೂರಿನಲ್ಲಿ ಮೊಮ್ಮಗನ ಪರ ಗೌಡರ ಪ್ರವಾಸ

ಚಿಕ್ಕಮಗಳೂರು : ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ಬಿಟ್ಟು ಅವರ ಮಟ್ಟಕ್ಕೆ ಬೆಳೆಯಬಲ್ಲವರು ಈ ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಕಡೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ-ಹೊಗಳಿದ ದೇವೇಗೌಡರು, ಈ ದೇಶದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ರಾಜಕಾರಣಿ ಯಾರಾದರೂ ಇದ್ದರೆ ಅದು ಮೋದಿ ಮಾತ್ರ ಎಂದರು.

I.N.D.I.A ಎಂದು ಕರೆದುಕೊಳ್ಳುವ ಕೂಟದಲ್ಲಿಯೂ ಯಾರೂ ಇಲ್ಲ, ಸ್ಟಾಲಿನ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಎಎಪಿ ನಾಯಕರು ಯಾರಿದ್ದಾರೆ ಹೇಳಿ? ಎಲ್ಲರೂ ಮನಸ್ಸಿಗೆ ಬಂದಂತೆ ಏನು ಬೇಕಾದ್ರೂ ಮಾತನಾಡಬಹುದು. ಏನಾದರೂ ಮಾತನಾಡಿಕೊಳ್ಳಲಿ, ಆದರೆ ಜನ ಮೆಚ್ಚಬೇಕು ಅಲ್ವಾ ಎಂದರು.

ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಅಂದೇ ಆ ಕೆಲಸ ಮಾಡಿ‌ ಆಗಿದೆ.

ಅಂದೇ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ, ಹರಿಯಾಣದಲ್ಲಿ ರೈತರು ಹೋರಾಟ ಮಾಡ್ತಿದ್ದಾರೆ. ರಾಹುಲ್ ಗಾಂದಿ ಇಡೀ ದೇಶಕ್ಕೆ ಸಾಲಮನ್ನಾ ಮಾಡ್ತೀವಿ ಅಂದಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರಲ್ಲ, ಸಾಲ ಮನ್ನಾ ಆಗಲ್ಲ ಎಂದು ವ್ಯಂಗ್ಯವಾಡಿದರು.

ದಿನವೂ ಜಾಹೀರಾತು ನೋಡಿ ಅವರು ಸಂತೃಪ್ತರಾಗಬೇಕು ಅಷ್ಟೇ. ಬೆಂಗಳೂರಲ್ಲಿ ಕುಡಿಯೋ ನೀರಿಗೆ ಹೊಡೆದಾಡ್ತಿದ್ದಾರೆ, ಇವರು ಅಲ್ಲಿಗೆ ಹೋಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.