ಹಾಸನ : ಹಾಸನ ಲೋಕಸಭಾ ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡ ಬಿಜೆಪಿ ನಾಯಕ ಪ್ರೀತಂಗೌಡ ನಡೆ ಬಗ್ಗೆ ನೇರವಾಗಿ ಪ್ರಧಾನಿ ಮೋದಿ ಅವರಿಗೆ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ.
ಇದರ ಪರಿಣಾಮವಾಗಿ ಪ್ರಧಾನಿ ಮೋದಿ ಸೂಚನೆ ಹಿನ್ನೆಲೆಯಲ್ಲಿ ಹಾಸನಕ್ಕೆ ಬಂದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾದ ಮೋಹನ್ ದಾಸ್ ಅಗರ್‌ವಾಲ್ ದಿಢೀರ್ ಸಮನ್ವಯ ಸಭೆ ನಡೆಸಿದರು.
ಪ್ರೀತಂಗೌಡ ಹಾಗೂ ಜೆಡಿಎಸ್ ನಾಯಕರ ನಡುವೆ ಹೊಂದಾಣಿಕೆ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸಮನ್ವಯ ಸಾಧಿಸಲು ಬಂದ ದೆಹಲಿ ನಾಯಕ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಉಪಸ್ಥಿತಿಯಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಪ್ರೀತಂಗೌಡ ಪರವಾಗಿ ಬ್ಯಾಟಿಂಗ್ ಮಾಡಿದ ಅಗರ್ವಾಲ್, ಪ್ರೀತಂಗೌಡರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದ ಅವರು ಪ್ರೀತಂಗೌಡ ಜತೆ ಜೆಡಿಎಸ್ ನಾಯಕರ ವರ್ತನೆ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದುವರೆಗೆ ನೀವು ಪ್ರೀತಂಗೌಡಗೆ ಯಾಕೆ ಫೋನ್ ಮಾಡಿಲ್ಲ ಎಂದು ಪ್ರಜ್ವಲ್ ಅವರನ್ನೇ ಪ್ರಶ್ನಿಸಿದ ಅಗರ್ವಾಲ್, ಅವರನ್ನ ಭೇಟಿಯಾಗದೆ ಪರ್ಯಾಯ ನಾಯಕರ ಭೇಟಿ ಮಾಡಿದ್ದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಜೆಡಿಎಸ್ ಮುಖಂಡರನ್ನೇ ತಬ್ಬಿಬ್ಬು ಮಾಡಿದರು.
ಜೆಡಿಎಸ್ ನಾಯಕರು ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಪ್ರೀತಂಗೌಡ ಖಂಡಿತಾ ಮೈತ್ರಿ ಪರ ಕೆಲಸ ಮಾಡ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡ್ತೇವೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.