ಜೆಡಿಎಸ್ ತವರಿನಲ್ಲಿ ಸಿಎಂ ಭರ್ಜರಿ ಪ್ರಚಾರ; ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರಕ್ಕೆ ಬಾರದೇ ತಪ್ಪು ಮಾಡಿದ್ದೆ, ನಾನು ಬಂದಿದ್ದರೆ ನಮ್ಮ ಅಭ್ಯರ್ಥಿ ಗೆಲ್ಲುತ್ತಿದ್ದರು ಎಂದ ಸಿದ್ದರಾಮಯ್ಯ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ ಗರ್ವ ಇಳಿಸುತ್ತೇನೆ ಎಂದಿದ್ದಾರೆ. ಈ ರಾಜ್ಯದಲ್ಲಿ ಎಲ್ಲಿವರೆಗೂ ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ಯಾರೂ ನನ್ನ ಗರ್ವ ಇಳಿಸುವುದಕ್ಕೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹೊಳೆನರಸೀಪುರದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹಿಂದೆ ದೇವೇಗೌಡರೇ ಮೋದಿಗೆ ಬಾಯಿಗೆ ಬಂದಂತೆ ಬೈದಿದ್ದರು. ಈಗ ಅವರೂ ಕೋಮುವಾದಿಗಳ ಜತೆ ಸೇರಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಳೆ ಬರುತ್ತಿರುವುದು ಶುಭ ಸೂಚನೆ, ಮಳೆ ಬರಲಿ, ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಬರಗಾಲದಿಂದ ತತ್ತರಿಸಿದೆ. ಕೇಂದ್ರ ಸರ್ಕಾರ ನಾವು ಮನವಿ ಕೊಟ್ಟು ಆರು ತಿಂಗಳಾದರೂ ನೆರವಿಗೆ ಬರಲಿಲ್ಲ. ಒಂದು ರೂಪಾಯಿಯೂ ಪರಿಹಾರ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಮಳೆ‌ ಬಂದರೆ ಬರಗಾಲದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಗೆ ನಾನು ಬರಲು ಸಾಧ್ಯ ಆಗಿರಲಿಲ್ಲ. ಆಗ ನಮ್ಮ ಅಭ್ಯರ್ಥಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ನಾನು ಹೊಳೆನರಸೀಪುರಕ್ಕೆ ಬಂದಿದ್ದರೆ ನಮ್ಮ ಅಭ್ಯರ್ಥಿ ನೂರಕ್ಕೆ ನೂರು ಗೆಲ್ಲುತ್ತಿದ್ದರು. ನನ್ನಿಂದ ತಪ್ಪಾಗಿದೆ ಎಂದರು.

ಅದಕ್ಕೆ ಈ ಬಾರಿ ತಪ್ಪು ಸರಿ ಮಾಡಿಕೊಳ್ಳಲು ಹೊಳೆನರಸೀಪುರಕ್ಕೆ ಬರಲೇ ಬೇಕು ಅಂತ ಬಂದಿದ್ದೇನೆ. ನಾನು ಹೊಳೆನರಸೀಪುರದಲ್ಲಿ ಹಿಂದೆ ಎಂದೂ ಇಷ್ಟು ಉತ್ಸಾಹ ನೋಡಿರಲಿಲ್ಲ.

ಹೊಳೆನರಸೀಪುರ ದಲ್ಲಿ ಕನಿಷ್ಠ 25 ಸಾವಿರ ಮತಗಳ ಮುನ್ನಡೆ ತೆಗೆದುಕೊಳ್ಳಬೇಕು. ನಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು ಎಂದರು.

ಸುರಿಯುವ ಮಳೆಯಲ್ಲೂ ನಿಂತು ಸಿಎಂ ಭಾಷಣ ಆಲಿಸಿದ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆಯ ಕರತಾಡನದ ಜತೆಗೆ ಜೈಕಾರ ಹಾಕುತ್ತಿದ್ದರು.