ಹಾಸನ : ಹಾಸನ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಸತ್ಯಭಾಮ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದೂರು ಸಲ್ಲಿಸಿದ್ದು, ಅದನ್ನಾಧರಿಸಿ ಆಯೋಗ ಡಿಸಿಯಿಂದ ಸ್ಪಷ್ಟನೆ ಕೇಳಿದೆ.
ಮಾರ್ಚ್ 20 ರಂದು ದೂರು ನೀಡಿರುವ ಎಚ್.ಡಿ.ದೇವೇಗೌಡರು, ಚುನಾವಣೆ ಹಿನ್ನೆಲೆಯಲ್ಲಿ ಡಿಸಿ ಸಿ.ಸತ್ಯಭಾಮ ಅವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಕಳೆದ ಎಂಟು ತಿಂಗಳಿಂದ ಹಾಸನದ ಡಿಸಿ ಆಗಿರುವ ಸಿ.ಸತ್ಯಭಾಮ ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಮಾತ್ರ ಕೆಲಸ ಮಾಡುತ್ತಾರೆ. ರಾಜಣ್ಣ ಅವರ ಸಮುದಾಯಕ್ಕೆ ಸೇರಿರುವ ಸತ್ಯಭಾಮ ಅವರಿಂದ ನಿಷ್ಪಕ್ಷಪಾತ ಆಡಳಿತ ಸಾಧ್ಯವಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹಾಸನ ಡಿಸಿ ಜನರ ಜೊತೆ ಸೌಜನ್ಯದ ವರ್ತನೆ ತೋರುವುದಿಲ್ಲ. ತಮ್ಮ ಸಹೊದ್ಯೋಗಿಗಳಿಗೆ ಗೌರವ ಕೊಡುವುದಿಲ್ಲ, ಎಲ್ಲರೊಟ್ಟಿಗೂ ಜಗಳ ಮಾಡಿಕೊಳ್ತಾರೆ. ಈ ಹಿಂದೆ ಅವರು ಕೋಲಾರದಲ್ಲಿ ಇದ್ದಾಗಲೂ ಸಹೋದ್ಯೋಗಿಗಳ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ಹಾಸನದಲ್ಲಿ ಫೆಬ್ರವರಿ 24 ಹಾಗೂ ಮಾರ್ಚ್ 1 ರಂದು ನಡೆದ ಸಿಎಂ ಕಾರ್ಯಕ್ರಮಕ್ಕೆ ಇಲಾಖೆಗಳಿಂದ ಹಣ ವಸೂಲಿ ಮಾಡಿರುವ ಆರೋಪವಿದೆ. ಹತ್ತಾರು ಲಕ್ಷ ಹಣ ವಸೂಲಿ ಮಾಡಿ ಜನರಿಗೆ ಹಂಚಿದ್ದಾರೆ. ಆಡಳಿತ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ತೀವ್ರ ಬರಗಾಲ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ, ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಹಾಸನ ಡಿಸಿ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.