ದೇವೇಗೌಡರ ಇಷ್ಟದೈವದ ಸನ್ನಿಧಿಯಲ್ಲಿ 80 ವರ್ಷಗಳ‌ ನಂತರ ಇಷ್ಟು ದೊಡ್ಡ ಪೂಜೆ ನಡೆಯುತ್ತಿರುವುದೇಕೆ?

ಹಾಸನ: ತೀವ್ರ ಅನಾರೋಗ್ಯಕ್ಕೆ ಒಳಗಾದ ಸಮಯದಲ್ಲಿ ಹೊತ್ತಿದ್ದ ಹರಕೆಯಂತೆ ಮಾಜಿ ಪ್ರಧಾ‌ನಿ ಎಚ್.ಡಿ. ದೇವೇಗೌಡರು ತಮ್ಮ ಇಷ್ಟದೈವ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ 1001 ಕಳಸಗಳೊಂದಿಗೆ ನಿನ್ನೆ ಸಂಜೆಯಿಂದ ವಿಶೇಷ ಪೂಜೆ ಕೈಗೊಂಡಿದ್ದಾರೆ.

ವಿವಿಧೆಡೆಯಿಂದ ಬಂದಿರುವ ಹತ್ತಾರು ಪುರೋಹಿತರು ಅಹೋರಾತ್ರಿ ಪೂಜೆ ನಡೆಸಿದ್ದು ಭಾನುವಾರ ಸಂಜೆಗೆ ಮುಕ್ತಾಯವಾಗಲಿದ್ದು ಭಾನುವಾರ ಕಳಸ ಪ್ರತಿಷ್ಠಾಪನೆಯಾಗಲಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ,‌ ಸೊಸೆ ಭವಾನಿ ರೇವಣ್ಣ ಪೂಜೆಯಲ್ಲಿ ಪಾಲ್ಗೊಂಡಿದ್ದು, ಸಂಜೆ ಕುಟುಂಬದ ಇತರ ಸದಸ್ಯರು ಆಗಮಿಸಲಿದ್ದಾರೆ.

ಎಂಭತ್ತು ವರ್ಷಗಳ‌ ಹಿಂದೆ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ 1001 ಕಳಸ ಪ್ರತಿಷ್ಠಾಪನೆ‌ ನಡೆದಿತ್ತು. ಆ ನಂತರ ಈಗ ಅಂತಹ ದೊಡ್ಡ ಪೂಜಾ ಕೈಂಕರ್ಯ ನಡೆಯುತ್ತಿರುವುದು ವಿಶೇಷವಾಗಿದೆ.

ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಾಳೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.