ರಾಜ್ಯ ಸರ್ಕಾರ ಸ್ಪಂದಿಸಿದರೆ ಶಿರಾಡಿಘಾಟ್ ನಲ್ಲಿ ಸುರಂಗ ನಿರ್ಮಾಣ; ದೇವೇಗೌಡರಿಗೆ ನಿತಿನ್ ಗಡ್ಕರಿ ಭರವಸೆ

ನವದೆಹಲಿ: ಸತತ ಭೂ ಕುಸಿತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ ಸೇರಿದಂತೆ ರಾಜ್ಯದ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಹೆದ್ದಾರಿಗಳು ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೇಡಿಕೆ ಸಲ್ಲಿಸಿದರು.

ನವದೆಹಲಿಯಲ್ಲಿಂದು‌ ಗಡ್ಕರಿ ಅವರನ್ನು ಭೇಟಿಯಾದ ಗೌಡರು, ಶಿರಾಡಿಘಾಟ್ ರಸ್ತೆ ಎರಡು ಬಂದರುಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಭೂ ಕುಸಿತದಿಂದ ಭಾರಿ ಅಪಾಯವಿದೆ. ಆದ್ದರಿಂದ ಆ ಮಾರ್ಗದ ಅಭಿವೃದ್ಧಿಗೆ ಸುರಂಗ ನಿರ್ಮಾಣ ಸೇರಿದಂತೆ ಎಲ್ಲ ಆಯ್ಕೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.

ಮಾಜಿ ಪ್ರಧಾನಿಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕರ್ನಾಟಕ ಸರ್ಕಾರ ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಿದರೆ ಶಿರಾಡಿ ಘಾಟ್‌ ರಸ್ತೆಯಲ್ಲಿ ಸುರಂಗ ನಿರ್ಮಾಣ ಮಾಡಲು ಹಾಗೂ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಸಿದ್ಧವಿದೆ. ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.

ಅಲ್ಲದೆ ಈ ಯೋಜನೆಗೆ ಕೆಲವು ಸಾವಿರ ಕೋಟಿಗಳಷ್ಟು ಹಣ ಹೂಡಿಕೆ ಮಾಡಬೇಕಾಗುತ್ತದೆ. ತಮ್ಮ ಇಲಾಖೆ ಅದನ್ನೂ ಪರಿಶೀಲಿಸಲಿದೆ ಎಂದು ನಿತಿನ್‌ ಗಡ್ಕರಿ ಭರವಸೆ ನೀಡಿದರು.