ಹಾಸನ ವಿಮಾನ ನಿಲ್ದಾಣ ಕಾಮಗಾರಿ ಬೇಗ ಪೂರ್ಣಗೊಳಿಸಿ; ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಗ್ರಹ

ನವದೆಹಲಿ: ಮಹತ್ವಾಕಾಂಕ್ಷೆಯ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಬೇಗ ಪೂರ್ಣಗೊಳಿ ಸುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಗುರುವಾರ ನಡೆದ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಬೇಲೂರು-ಹಳೇಬೀಡು-ಶ್ರವಣಬೆಳಗೊಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿ ಆಗುವುದರ ಜೊತೆಗೆ ಹಾಸನ ಜಿಲ್ಲೆಯ ರೈತರಿಗೆ ಕೃಷಿ ರಫ್ತು ಹೆಚ್ಚಿಸಲು ಸಹಕಾರಿ ಯಾಗಲಿದೆ. ಹಾಗಾಗಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದರು.

ಇದೇ ಸಮಯದಲ್ಲಿ ತಮ್ಮ ಅವಧಿಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಲಘು ಯುದ್ಧ ವಿಮಾನಗಳು ಹಾಗೂ 65 ಆಸನಗಳ ಸಣ್ಣ ವಿಮಾನಗಳ ಉತ್ಪಾದನೆಗೆ ಅನುಮತಿ ನೀಡಿದ್ದನ್ನು ದೇವೇಗೌಡರು ನೆನೆದರು.