ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಪ್ರಜ್ವಲ್, ಚೈಲ್ಡು, ಎಳಸು; ಗೋಪಾಲಸ್ವಾಮಿ ವಾಗ್ದಾಳಿ

ಆರು ವರ್ಷ ನಾನು ಏನು ಮಾಡಿದ್ದೇನೆ ಅನ್ನೋದನ್ನು ಹಾಲಿ ಎಂಎಲ್‌ಸಿಯಾಗಿರುವ ನಿಮ್ಮ ಅಣ್ಣ ಕೇಳಿ; ಎಂ.ಎ.ಗೋಪಾಲಸ್ವಾಮಿ ವಾಗ್ದಾಳಿ

ಹಾಸನ: ಕಾನೂನು ಪಾಠ ಹೇಳಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಪ್ರಜ್ವಲ್, ಚೈಲ್ಡು, ಎಳಸು ಎಂದು ಜರಿದರು.
ಕಳೆದ ನಾಲ್ಕೂವರೆ ವರ್ಷ ಎಲ್ಲೂ ಬಂದಿರಲಿಲ್ಲ. ಅಧಿಕಾರಿಗಳ ಜೊತೆ ವೇದಿಕೆ ಮೇಲೆ ನಿಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕೂರಿಸಿಕೊಂಡು ಸಭೆ ಮಾಡುತ್ತೀರಿ, ನಿಮಗೆ ಶಿಷ್ಟಾಚಾರದ ಬಗ್ಗೆ ಜ್ಞಾನ ಇದೆಯೇ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಪಕ್ಷದ ಮುಖಂಡರ ಜೊತೆಗೆ ತಹಸೀಲ್ದಾರ್, ತಾಪಂ ಇಒ ಸಭೆ ಮಾಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದೇನೆ ಎಂದರು.
ಲೋಕಸಭಾ ಚುನಾವಣೆಗೆ ಸರಿಯಾಗಿ ಅರ್ಜಿ ಹಾಕಲು ಬಾರದ ನೀವು ನನಗೆ ಕಾನೂನು ಅರಿವಿನ ಪ್ರಶ್ನೆ ಮಾಡಬೇಡಿ, ಲೋಕಸಭಾ ಸದಸ್ಯನಾಗಲು ನಿನಗೆ ಅರ್ಹತೆ ಇಲ್ಲ, ನೀನು ರಾಜಕೀಯ ಸಭೆ ಮಾಡ್ತೀಯಾ ಮಾಡು. ಅದನ್ನು ಬಿಟ್ಟು ಏನೂ ಅರಿವಿಲ್ಲದವನಂತೆ ಮಾತಾಡುವುದು ಸಲ್ಲದು ಎಂದರು. ನೀನೊಬ್ಬ ವಿದ್ಯಾವಂತನಾಗಿ ಆ ತರ ಎಲ್ಲಾ ಸ್ಟೇಟ್‌ಮೆಂಟ್ ಕೊಡಬಾರದು. ನಾನು ತುಘಲಕ್ ದರ್ಬಾರ್ ಮಾಡ್ತೀನಿ ಅಂದ್ರೆ ನನ್ನದೇನು ತಕರಾರು ಇಲ್ಲ. ಸರ್ಕಾರದ ಹಣದ ಬದಲಿಗೆ ನಿನ್ನ ದುಡ್ಡಿನಿಂದ ಸಭೆ ಮಾಡು ಎಂದರು.
ನಾಲ್ಕೂವರೆ ವರ್ಷ ಕದ್ದುಹೋಗಿ ನಿನ್ನೆ, ಮೊನ್ನೆ ಬಂದು ಓಡಾಡಿಕೊಂಡು ನನ್ನ ಪ್ರಶ್ನೆ ಏಕೆ ಮಾಡ್ತಿಯಾ, ನಾನು ಯಾವತ್ತೂ ನಿನ್ನ ಪ್ರಶ್ನೆ ಮಾಡಿಲ್ಲ. ನೀನು ಎಳಸಿದ್ದೀಯಾ ಈಗಲಾದರೂ ತಿದ್ದಿಕೊ,
ಹೈಕೋರ್ಟ್ ಸಂಸದ ಸ್ಥಾನ ಅನರ್ಹಗೊಳಿಸಿದ ನಂತರ ಸುಪ್ರೀಂಕೋರ್ಟ್ನಲ್ಲಿ ಸ್ಟೇ ತಂದಿದ್ದಾರೆ. ಕಾನೂನಿನ ಅರಿವಿದ್ದಿದ್ದರೆ ನಾಮಪತ್ರ ಸಲ್ಲಿಸುವ ವೇಳೆ ತಪ್ಪು ಮಾಡುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.
ಅವರ ಅಣ್ಣನನ್ನು ಕೇಳಲಿ:
ನಾನು ಎಂಎಲ್‌ಸಿಯಾದಾಗ ಕೆಲಸ ಮಾಡಿಲ್ಲ ಎಂಬ ಪ್ರಜ್ವಲ್ ಟೀಕೆಗೆ ಆರು ವರ್ಷ ನಾನು ಏನು ಮಾಡಿದ್ದೇನೆ ಅನ್ನೋದನ್ನು ಹಾಲಿ ಎಂಎಲ್‌ಸಿಯಾಗಿರುವ ನಿಮ್ಮ ಅಣ್ಣ ಕೇಳಿದರೆ ಮಾಹಿತಿ ಸಿಗಲಿದೆ, ಅವರಿಗೆ ಹೇಳಿ ಎಂದು ಕುಟುಕಿದರು.
ನಾನು ದೇವೇಗೌಡರ ಬಗ್ಗೆ ಎಂದೂ ಮಾತನಾಡಿಲ್ಲ. ಯಾರೊಂದಿಗೆ ಕುಂದುಕೊರತೆ ಸಭೆ ಮಾಡಬೇಕು ಎಂಬ ಕನಿಷ್ಠ ಅರಿವು ನಿನಗಿಲ್ಲ. ಕಾನೂನು ಬಿಟ್ಟು ಯಾರೂ, ಏನೂ ಮಾಡಬಾರದು ಎಂಬುದು ನನ್ನ ಉದ್ದೇಶ ಎಂದರು. ನಾನೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ತವರು ಕ್ಷೇತ್ರ ಅನ್ನೋ ಕಾರಣಕ್ಕೆ ಚನ್ನರಾಯಪಟ್ಟಣಕ್ಕೆ ಸ್ವಲ್ಪಜಾಸ್ತಿ ಅನುದಾನ ಕೊಟ್ಟಿರಬಹುದು ಎಂದು ಹೇಳಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಮುಖಂಡರಾದ ಮಂಜೇಗೌಡ, ಮೋಹನ್ ಇದ್ದರು.

ಲೋಕಸಭೆ ಚುನಾವಣೆಗೆ ನಾನೂ ಆಕಾಂಕ್ಷಿ. ಡಿಸೆಂಬರ್ ಒಳಗೆ ಟಿಕೆಟ್ ನೀಡಿ ಎಂದು ಕೇಳಿದ್ದೇನೆ.
ಬಾಗೂರು ಮಂಜೇಗೌಡರಿಗೆ ಕೊಟ್ಟರೂ ಸಂತೋಷ. ಡಿ.ಕೆ.ಸುರೇಶಣ್ಣ ಹಾಸನಕ್ಕೆ ಬರಲ್ಲ. ಎ.ಟಿ.ರಾಮಸ್ವಾಮಿ ಅವರು ಬಂದರೆ ವೈಯಕ್ತಿಕವಾಗಿ ಸ್ವಾಗತ. ಈ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ಕೈಗೊಳ್ಳುವುದೋ ಅದಕ್ಕೆ ಬದ್ಧ.
-ಎಂ.ಎ.ಗೋಪಾಲಸ್ವಾಮಿ, ಮಾಜಿ ಎಂಎಲ್‌ಸಿ