ದಾನ-ಧರ್ಮದಿಂದ ಪುಣ್ಯ ಪ್ರಾಪ್ತಿ: ಮುದ್ದು ಮಾರುತಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಎಂ.ಎ.ಗೋಪಾಲಸ್ವಾಮಿ

ಚನ್ನರಾಯಪಟ್ಟಣ: ಜನರು ಧಾರ್ಮಿಕ ನಂಬಿಕೆಗಳನ್ನು ಪಾಲಿಸುವ ಜತೆಗೆ ಧಾರ್ಮಿಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬೇಕು ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಹೇಳಿದರು.

ತಾಲೂಕಿನ ಮಾಚಭೂವನಹಳ್ಳಿ (ಕಾವಲು ಬಾರೆ) ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮುದ್ದು ಮಾರುತಿ ದೇಗುಲದ ಲೋಕಾರ್ಪಣೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿ, ದಾನ, ಧರ್ಮ ಮಾಡಿದರೆ ಪುಣ್ಯ ಲಭಿಸಲಿದೆ ಎಂದರು.

ನಿಸರ್ಗದ ಹಿಂದೆ ನಿಂತು ಜಗತ್ತನ್ನು ಮುನ್ನಡೆಸುವ ಅದ್ಭುತವಾದ ಮಹಾನ್ ಶಕ್ತಿಯೊಂದಿದೆ ಎನ್ನುವುದು ಅಕ್ಷರಶಃ ಸತ್ಯ. ಅಶಿಸ್ತಿನ ಬದುಕನ್ನು ತೊರೆದು ನಿಸ್ವಾರ್ಥದೊಂದಿಗೆ ಸನ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ ಎಂದರು.

ಪ್ರಕೃತಿಯ ಮಡಿಲಲ್ಲಿ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಸಾಲವನ್ನು ಮರುಪಾವತಿಸಿಯೇ ಪಯಣಿಸಿಬೇಕು. ಆದರೆ ಇದ್ದು ಹೋಗುವ ನಡುವಿನ ದಿನಗಳಲ್ಲಿ ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ಸಲಹೆ ನೀಡಿದರು.

ನಾವು ಎಷ್ಟೆಲ್ಲ ದುಡಿದಿದ್ದೇವೆ, ಏನೆಲ್ಲಾ ಸಂಪಾದಿಸಿದ್ದೇವೆ ಎಂದು ಎಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ಉಪಯೋಗಿಸಿದ್ದೇನೆ ಎಂಬುದು ಮುಖ್ಯವಾಗಿರುತ್ತದೆ. ಕೂಡಿಟ್ಟು ಸ್ವಾರ್ಥದ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಯೋಗ್ಯ ಎಂದರು.

ಬೆಂಗಳೂರು ಎಂಎಲ್‌ಸಿ ಪ್ರಭಾಕರ ರೆಡ್ಡಿ, ಹಿರೀಸಾವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಪ್ರಧಾನ ಅರ್ಚಕ ಹರ್ಷವರ್ಧನ ಸ್ವಾಮೀಜಿ, ಗುಡಿಗೌಡ ಲೋಕೇಶ್, ಪ್ರಮುಖರಾದ ಚಿಕ್ಕೋನಹಳ್ಳಿ ಗಂಗಾಧರ್, ಕಾವಲು ಬಾರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.