ಹಾಸನ: ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಇಂದು ಪುತ್ರಿಯೊಂದಿಗೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದರು.
ದೇವಿ ದರ್ಶನದ ಬಳಿಕ ಮಾತನಾಡಿದ ಜೆಡಿಎಸ್ ಮಾಜಿ ಶಾಸಕ, ಈ ನಾಡನ್ನು ಸುಭಿಕ್ಷವಾಗಿ ಇಡಲಿ. ಎಲ್ಲರೂ ಧರ್ಮದ ಹಾದಿಯಲ್ಲಿ ನಡೆಯಲಿ, ಎಲ್ಲರಿಗೂ ಶುಭವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ನಮ್ಮ ಪಕ್ಷದ ನಿಖಿಲ್ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಎನ್‌ಡಿಎಯಿಂದ ಟಿಕೆಟ್ ತೀರ್ಮಾನ ಆಗಿತ್ತು. ಅದರ ಪ್ರಕಾರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದಾರೆ. ನಿನ್ನೆ ಅವರ ನಾಮಪತ್ರ ಸಲ್ಲಿಕೆ ಆಗಿದೆ. ಅವರ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಚನ್ನಪಟ್ಟಣ ಜನತೆ ಅವರ ಪರ ತೀರ್ಮಾನ ತೆಗೆದುಕೊಂಡು ಅತಿ ಹೆಚ್ಚು ಅಂತರದಿಂದ ಗೆಲ್ತಾರೆ. ದೇವೇಗೌಡರು, ಕುಮಾರಸ್ವಾಮಿ ಮಾಡಿರುವ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವ ನಂಬಿಕೆ ಇದೆ.
ಎನ್‌ಡಿಎ ಕೂಟದ ಬಿಜೆಪಿ ಹಾಗೂ ಜಾತ್ಯಾತೀತ ಜನತಾದಳ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮೂರು ಕಡೆಯೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ನಮಗಿದೆ. ವಿಶೇಷವಾಗಿ ಚನ್ನಪಟ್ಟಣದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ.
ಚುನಾವಣೆ ಅಂದಮೇಲೆ ಎಲ್ಲರೂ ಪ್ರತಿಷ್ಠೆಯಾಗಿ ತೆಗೆದುಕೊಳ್ತಾರೆ. ನಾವೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ, ಅದೇ ರೀತಿ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹಾಗಂತ ನಾವೇನೂ ಎದೆಗುಂದಿಲ್ಲ.
ನಿನ್ನೆ ಕೇವಲ ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣದ ಮಹಾಜನತೆ ಯಾವ ರೀತಿ ಹರಿದು ಬಂದಿದ್ದರು ಎನ್ನುವುದನ್ನು ನೋಡಿದರೆ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದರು.