ನಕಲಿ ದಾಖಲೆ ಆಧಾರ್ ವಂಚಕರ ದೊಡ್ಡ ಜಾಲವೇ ಇದೆ: ಸೂಕ್ತ ತನಿಖೆ ನಡೆಸಿ ಎಂದು ಒತ್ತಾಯಿಸಿದ ಎಟಿಆರ್

ಎಸ್ಪಿ ಡ್ಯೂಟಿ, ಕ್ರೈಂ ಡ್ಯೂಟಿ ಮಾಡುತ್ತಿರುವವರ ಜವಾಬ್ದಾರಿ ಏನು? ಕೇವಲ ಹಣ ವಸೂಲಿಗಾಗಿ ಇರುವುದಾ?

ಹಾಸನ: ನಕಲಿ ಆಧಾರ್ ಕಾರ್ಡ್ ಮಾಡುವವರ ದೊಡ್ಡ ಜಾಲವೇ ಇದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿಯಲ್ಲೇ ನಕಲಿ ಆಧಾರ್ ಕಾರ್ಡ್ ಜಾಲ ಬಯಲಾಗಿದೆ. ಅದನ್ನು ಡಿಸಿ ಅವರು ಪತ್ತೆ ಹಚ್ಚಿ ತನಿಖೆಗೆ ಆದೇಶ ಮಾಡಿದ್ದಾರೆ. ದುಡ್ಡಿನ ಆಸೆಗೆ ನಕಲಿ ದಾಖಲೆ ಸೃಷ್ಟಿಸಿ ಹೊರಗಿನವರಿಗೆ ಆಧಾರ್ ಮಾಡಿಕೊಡುವ ದಂಧೆ ನಡೆಯುತ್ತಿದೆ ಎಂದರು.

ಇದರ ಹಿಂದೆ ದೊಡ್ಡ ಜಾಲವೇ ಇದೆ, ಅನೇಕರು ಸೇರಿ ಮಾಡುತ್ತಿದ್ದಾರೆ. ಇಂಟರ್ ನೆಟ್ ಕೇಂದ್ರದವರೂ ಭಾಗಿಯಾಗಿದ್ದಾರೆ. ಸ್ಪಂದನಾ, ಗ್ರಾಮ- 1, ಕರ್ನಾಟಕ-1 ಹೀಗೆ
ಅನೇಕ ಕಡೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಒಬ್ಬರು, ಇಬ್ಬರಿಂದ ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.

ಒಂದು ಕಾರ್ಡ್ ಗೆ 10-15 ಸಾವಿರ ರೂ. ಹಣ ಪಡೆದು, ದುಷ್ಟರು, ದುರಾಸೆ ಇರುವವರು ಹೀಗೆ ಮಾಡುತ್ತಿದ್ದಾರೆ. ಇ-ಖಾತೆಯನ್ನೂ ಹಣಕ್ಕಾಗಿ ಮಾಡಿಕೊಡಲಾಗುತ್ತಿದೆ. ನಕಲಿ ಜಾತಿ ಹಾಗೂ ಅಂಕಪಟ್ಟಿ ತಯಾರಿಕೆ ಜಾಲವೂ ಇದ್ದು, ನಕಲಿ ನೋಟ್ ಮುದ್ರಣ-ಚಲಾವಣೆಯೂ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಆರೋಪಿಸಿದರು.

ಆದರೂ ಅಂಥವರಿಗೆ ಶಿಕ್ಷೆ ಆಗಲಿಲ್ಲ, ಆಡಳಿತ ವ್ಯವಸ್ಥೆ ಅಷ್ಟು ದುರ್ಬಲ ಆಗಿದೆ ಎಂದು ಬೇಸರ ಹೊರ ಹಾಕಿದರು. ಇದನ್ನೇ ದಂಧೆಕೋರರು, ಲೂಟಿಕೋರರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ದೇಶದ್ರೋಹದ ಕೆಲಸ ಎಂದರು.

ಕೂಡಲೇ ಅಕ್ರಮ ನುಸುಳುಕೋರರ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಆಡಳಿತ ವಿಶ್ವಾಸ ಕಳೆದುಕೊಳ್ಳಲಿದೆ, ಕಣ್ಣೊರೆಸುವ ಕೆಲಸ ಆಗಬಾರದು ಎಂದು ಸಲಹೆ ನೀಡಿದರು.

ಮತ್ತೊಂದೆಡೆ ಪರಪ್ಪರ ಅಗ್ರಹಾರ ಕರ್ಮಕಾಂಡ ಬಯಲಾಗಿದೆ. ಸೆರೆ ಇದ್ದವರು ಸುಧಾರಣೆ ಗೊಂಡು ಹೊರ ಬರಬೇಕು. ಆದರೆ ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿರುವವರು ಅದಕ್ಕಿಂತಲೂ ಉಗ್ರವಾಗಿ, ಕುಖ್ಯಾತರಾಗಿ ಹೊರಗೆ ಬರುತ್ತಾರೆ.

ಇಂಥವರನ್ನು ನೋಡಿ ಜನ ಭಯ ಪಡುವಂತಾಗಿದೆ ಎಂದರು.
ಇದನ್ನು ನೋಡಿದರೆ ಜೈಲು ಪರಿವರ್ತನಾ ತಾಣ ಎನ್ನಬೇಕಾ, ಐಷಾರಾಮಿ ಜೀವನ ಅಲ್ಲೇ ಸಿಕ್ಕರೆ ಬದಲಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸೆರೆಮನೆಗಳು ಅವ್ಯವಸ್ಥೆ ಆಗರ, ಭ್ರಷ್ಟಾಚಾರದ ಕೂಪ ಆಗಿವೆ. ಹಣ ಕೊಟ್ಟರೆ ಎಲ್ಲವೂ ಸಿಗಲಿದೆ, ಆಡಳಿತ ನಡೆಸುವವರಿಗೆ ಇದು ಗೊತ್ತಿಲ್ವಾ ಎಂದು ಕೇಳಿದರು. ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಲೋಕಾಯುಕ್ತ ಏನು ಮಾಡುತ್ತಿದೆ. ಏಕೆ ರೇಡ್ ಮಾಡುತ್ತಿಲ್ಲ? ಇನ್ನಾದರೂ ಸುಮೋಟೋ ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಎಸ್ಪಿ ಡ್ಯೂಟಿ, ಕ್ರೈಂ ಡ್ಯೂಟಿ ಮಾಡುತ್ತಿರುವವರ ಜವಾಬ್ದಾರಿ ಏನು? ಕೇವಲ ಹಣ ವಸೂಲಿಗಾಗಿ ಇರುವುದಾ? ಎಂದು ಖಾರವಾಗಿ ಪ್ರಶ್ನಿಸಿದರು. ಆಡಳಿತ ನಡೆಸುವರಿಗೆ ಗೊತ್ತಿದ್ದೇ ಇಂಥ ಅಕ್ರಮ ನಡೆಯುತ್ತಿವೆ, ದಂಧೆ ಹೆಚ್ಚಾಗುತ್ತಿವೆ, ಸರ್ಕಾರ ಹೊಣೆ ಹೊತ್ತು ಇನ್ನಾದರೂ ಕ್ರಮ ಕೈಗೊಳ್ಳಬೇಕು ಎಂದರು.

ಇಂದು ಹಣ ಪೂಜೆ ಕಾಲ, ಸೇವೆ- ಕರ್ತವ್ಯಕ್ಕೆ ಪೂಜೆ ಇಲ್ಲವಾಗಿದೆ ಎಂದು ಬೇಸರ ಹೊರ ಹಾಕಿದರು. ಇನ್ನಾದರೂ ತಪ್ಪಿಸ್ಥರ ಜಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನೀವು ವಿಫಲ ಎಂದು ಹೇಳಬೇಕಾಗುತ್ತದೆ ಎಂದು ಸರ್ಕಾರ, ಜಿಲ್ಲಾಡಳಿತದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮಾದೇಶ್, ಜನಾರ್ದನ ಗುಪ್ತಾ, ಕೇಶವಮೂರ್ತಿ, ಲೋಕೇಶ್ ಇದ್ದರು.

ಅರಕಲಗೂಡು ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ  ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ತಪ್ಪಾಗಿದ್ದರೆ ಕ್ರಮ ಆಗಲಿ, ಅರಣ್ಯ ನಾಶಕ್ಕೆ ಅಧಿಕಾರಿಗಳೇ ಕಾರಣ, ಅರಣ್ಯ ಸಂರಕ್ಷಣೆ ಆಗುತ್ತಿಲ್ಲ. ಇಲಾಖೆಯನ್ನು ವಿಭಾಗ ಮಾಡಿದರೂ, ಅರಣ್ಯ ಉಳಿಸುವ ಕೆಲಸ ಆಗುತ್ತಿಲಲ್ಲ. ಸ್ಥಳೀಯ ಶಾಸಕರು ದನಿ ಎತ್ತಿದ್ದಾರೆ. ಮುಂದೆ ಏನಾಗಲಿದೆ ನೋಡೋಣ ಎಂದರು.